ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ರೈತರು ಆಗ್ರಹಿಸಿದ್ದಾರೆ.
ನಗರವನ್ನ ವಾಣಿಜ್ಯ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಬಿಎಸ್ವೈ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ಕಿರು ವಿಮಾನ ನಿಲ್ದಾಣ ಮಾಡಲು 662.38 ಎಕರೆ ಭೂಮಿಯನ್ನ ರೈತರಿಂದ ಪಡೆಯಲಾಗಿತ್ತು. ಬಳಿಕ ವಿವಿಧ ಕಾರಣಗಳಿಂದ ವಿಮಾನ ನಿಲ್ದಾಣದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಬಿಎಸ್ವೈ ಸಿಎಂ ಆದ ಬಳಿಕ ಮತ್ತೆ ವಿಮಾನ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ.
2009ರಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ, ನಗರ ವ್ಯಾಪ್ತಿಯಲ್ಲಿ ಒಂದು ಸೈಟು ಹಾಗೂ ಒಂದು ಉದ್ಯೋಗ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಈಗ 13 ವರ್ಷವಾದರೂ ಸಹ ಅದು ಇನ್ನೂ ಈಡೇರಿಲ್ಲ. ಈಗ ಯಡಿಯೂರಪ್ಪನವರು ಹೇಳಿದಂತೆ ನಡೆದುಕೊಳ್ಳಲಿ ಎಂದು ಭೂಮಿ ನೀಡಿದ ರೈತರ ಆಗ್ರಹಿಸಿದ್ದಾರೆ.
ಕಳೆದ 13 ವರ್ಷಗಳ ಹಿಂದೆ ಸರ್ವೆ ನಂಬರ್ 112, 113 ಹಾಗೂ 114ರಲ್ಲಿ 16 ಜನ ರೈತರ 26 ಎಕರೆ 34 ಗುಂಟೆ ಭೂಮಿಯನ್ನ ವಶಕ್ಕೆ ಪಡೆಯಲಾಗಿತ್ತು. ಹಿಂದೆ ಪ್ರತಿ ಎಕರೆಗೆ ಕೇವಲ 12 ಲಕ್ಷ ನೀಡಲಾಗಿತ್ತು. ಇದಕ್ಕೆ ವಿರೋಧವಾಗಿ ಒಟ್ಟು 26 ರೈತರು ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ಆದೇಶದಂತೆ ನಮಗೆ ಪರಿಹಾರ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ರಾಘವೇಂದ್ರ, ಸದ್ಯ ಭೂಮಿ ನೀಡುವಿಕೆಯ ಕುರಿತು ಸಮಸ್ಯೆ ಉದ್ಭವವಾಗಿದೆ. ಇದನ್ನು ಅದಷ್ಟು ಬೇಗ ಪರಿಹಾರಿಸಲಾಗುವುದು ಎಂದು ತಿಳಿಸಿದ್ದಾರೆ.