ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಅನ್ನದಾತರ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಹೌದು, ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಂಜನಾಪುರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಜನರು ಭೇಟಿ ನೀಡುತ್ತಿದ್ದಾರೆ.
ಅಂಜನಾಪುರ ಜಲಾಶಯವು 21 ಅಡಿಗಳಷ್ಟು ಎತ್ತರ ಇದೆ ಹಾಗೂ ಜಲಾಶಯಕ್ಕೆ ಒಟ್ಟು 70 ಗೇಟ್ಗಳಿವೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ 70 ಗೇಟ್ ಗಳನ್ನೂ ಓಪನ್ ಮಾಡಲಾಗಿದೆ. ಶಿಕಾರಿಪುರ ಭಾಗದ ರೈತರ ಭೂಮಿಗೆ ನೀರು ಒದಗಿಸುವ ಜಲಾಶಯ ಇದಾಗಿದ್ದು, ಜಲಾಶಯದ ಸಾಮರ್ಥ್ಯ 1.82 ಟಿಎಂಸಿ ಗಳಷ್ಟಾಗಿದೆ.
ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣಕ್ಕೆ ಇಲ್ಲಿಂದಲೇ ಕುಡಿಯುವ ನೀರು ಸರಬರಾಜಾಗುತ್ತದೆ. ಜೊತೆಗೆ 6,732 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ರಿಪ್ಪನ್ ಪೇಟೆ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾದರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತದೆ. ಒಟ್ಟಾರೆ ಜಲಾಶಯ ಭರ್ತಿಯಿಂದ ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ.
ಓದಿ: ರಂಗನತಿಟ್ಟು ಪಕ್ಷಿಧಾಮ ಮುಳುಗಡೆ: ಕೆಆರ್‌ಎಸ್ ಡ್ಯಾಂನಿಂದ 41,000 ಕ್ಯೂಸೆಕ್ ಬಿಡುಗಡೆ