ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ವಿರುದ್ದ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ,ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.
ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಹಾಗೂ ವಿದ್ಯುತ್ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿ ರೈತರ ಮರಣ ಶಾಸನ ಬರೆದಿದೆ ಎಂದರು.
ಪ್ರಮುಖವಾಗಿ ಕೃಷಿ ವಲಯವನ್ನು ಖಾಸಗಿಕರಣಗೊಳಿಸುವ ದೃಷ್ಟಿಯಿಂದ ಈ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದು ಕಾರ್ಪೋರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿದಂತೆ ಆಗಿದೆ. ಅಲ್ಲದೇ ಭೂ ಸುಧಾರಣಾ ಕಾಯ್ದೆಯಿಂದ ಯಾರೂ ಬೇಕಾದರೂ ಭೂಮಿ ಖರೀದಿಗೆ ಮುಂದಾಗಬಹುದಾಗಿದೆ. ಹೀಗಾಗಿ ಇದನ್ನು ವಿರೋಧಿಸಿ ಅಧಿವೇಶನ ನಡೆಯುವ ಸೆಪ್ಟೆಂಬರ್ 21 ರಿಂದ ನಮ್ಮ ಹೋರಾಟ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಇದಕ್ಕೆ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ರೈತರು ಆಗಮಿಸುತ್ತಿದ್ದಾರೆ ಎಂದ ಅವರು, ಅಂದು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮೌರ್ಯ ಸರ್ಕಲ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ನಮ್ಮ ಹೋರಾಟ ಸುಗ್ರೀವಾಜ್ಞೆ ಹಿಂಪಡೆಯುವ ತನಕ ನಡೆಯುತ್ತದೆ ಎಂದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಮಂಜಪ್ಪ, ರಾಮಚಂದ್ರಪ್ಪ ಸೇರಿ ಇತರರು ಹಾಜರಿದ್ದರು.