ಶಿವಮೊಗ್ಗ : ಮುಂಗಾರು ಆರಂಭದಿಂದಲೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಲಕ್ಕವಳ್ಳಿ ಗ್ರಾಮದಲ್ಲಿರುವ ಭದ್ರಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ.
186 ಅಡಿಯ ಎತ್ತರದ ಡ್ಯಾಂ ಈಗಾಗಲೇ 185.70 ಅಡಿ ಭರ್ತಿಯಾಗಿರುವ ಹಿನ್ನೆಲೆ ಡ್ಯಾಂನ 4 ಕ್ರಸ್ಟ್ ಗೇಟ್ಗಳನ್ನು ತೆರೆದು ನೀರನ್ನು ಭದ್ರಾ ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಭದ್ರಾ ಅಣೆಕಟ್ಟೆಯಿಂದ ಸದ್ಯ 1750 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಭದ್ರಾ ಜಲಾಶಯ ತುಂಬುವ ಹಂತಕ್ಕೆ ಬಂದಿರುವುದರಿಂದ ಶಿವಮೊಗ್ಗ ಜಿಲ್ಲೆ ಅಷ್ಟೇ ಅಲ್ಲ, ದಾವಣಗೆರೆ, ಹಾವೇರಿ, ಬಳ್ಳಾರಿ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ವರ್ಷ ಡ್ಯಾಂ ಆಗಸ್ಟ್ ತಿಂಗಳಲ್ಲೇ ಭರ್ತಿಯಾಗಿತ್ತು. ಭದ್ರಾ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಾದ ಭಾರೀ ವರ್ಷಧಾರೆಯಿಂದ ಅಣೆಕಟ್ಟು ತುಂಬಲು ಕೇವಲ 0.30 ಅಡಿಯಷ್ಟೇ ಬೇಕಿದೆ. ಪ್ರಸ್ತುತ ಡ್ಯಾಂಗೆ 8,653 ಕ್ಯೂಸೆಕ್ನಷ್ಟು ಒಳ ಹರಿವಿದ್ದು, 4 ಕ್ರಸ್ಟ್ ಗೇಟ್ಗಳಿಂದ 1750 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಜೊತೆಗೆ ಭದ್ರಾ ಎಡದಂಡೆ, ಬಲದಂಡೆ ಹಾಗೂ ಭದ್ರಾ ಮೇಲ್ದಂಡೆ ಕಾಲುವೆಗಳ ಮೂಲಕ ನೀರನ್ನು ಬಿಡಲಾಗುತ್ತಿದೆ.
ಭದ್ರಾ ಅಣೆಕಟ್ಟೆಯ ನೀರು ತುಂಗಾಭದ್ರಾ ಜಲಾಶಯವನ್ನು ಸೇರುವುದರಿಂದ ಹಲವು ಜಿಲ್ಲೆಗಳ ಜನರು ನೀರನ್ನು ಬಳಸುತ್ತಿದ್ದಾರೆ. ಭದ್ರಾ ಜಲಾಶಯದಿಂದ ಸದ್ಯ ಒಟ್ಟಾರೆ 2 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹೋಗುತ್ತಿದ್ದು, ಒಳ ಹರಿವು ಹೆಚ್ಚಾದರೆ ಮತ್ತೆ ಹೊರ ಹರಿವಿನ ಪ್ರಮಾಣ ಹೆಚ್ಚಾಗಲಿದೆ.
ಸದ್ಯ 4 ಗೇಟ್ಗಳಿಂದ ನೀರು ಹಾಲ್ನೊರೆಯಂತೆ ನದಿಗೆ ಹೋಗುತ್ತಿದೆ. ನೀರು ಹರಿಯುವುದನ್ನು ನೋಡುವುದೇ ಸುಂದರ. ಕಣ್ಣು ಹಾಯಿಸಿದಷ್ಟು ದೂರವೂ ಬರೀ ನೀರೇ ಕಾಣುತ್ತಿದೆ. ಜಲರಾಶಿ ನೋಡಲು ಎರಡು ಕಣ್ಣು ಸಾಲದಾಗಿದೆ.
ಜಲಾಶಯದ ಕ್ರಸ್ಟ್ ಗೇಟ್ಗಳಿಂದ ನೀರು ಭೋರ್ಗರೆದು ನದಿಗೆ ಧುಮ್ಮಿಕ್ಕುವ ದೃಶ್ಯ ಎಲ್ಲರಲ್ಲೂ ರೋಮಾಂಚನವನ್ನುಂಟು ಮಾಡುತ್ತದೆ. ಹೀಗಾಗಿ, ಪ್ರಸ್ತುತ ಭದ್ರಾ ಜಲಾಶಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ನದಿಗೆ ನೀರು ಹರಿಸುತ್ತಿರುವುದರಿಂದ ಭದ್ರಾ ಅಚ್ಚುಕಟ್ಟಿನ ರೈತರು ಉತ್ತಮ ಬೆಳೆ ಬೆಳೆಯುವ ಉತ್ಸಾಹದಲ್ಲಿದ್ದಾರೆ.
ಈ ಬಾರಿ ಮುಂಗಾರು ಆರಂಭದಿಂದಲೂ ಮಲೆನಾಡು ಭಾಗದಲ್ಲಿ ಉತ್ತಮವಾಗಿ ಮಳೆಯಾದ ಕಾರಣದಿಂದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಭದ್ರಾ ಜಲಾಶಯ ಭರ್ತಿಯಾಗಿರುವುದಕ್ಕೆ ಪ್ರವಾಸಿಗರು ಹಾಗೂ ಈ ಭಾಗದ ರೈತರು ಇದೀಗ ಫುಲ್‌ಖುಷ್ ಆಗಿದ್ದಾರೆ.