ಶಿವಮೊಗ್ಗ : ರಕ್ತಗತವಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸುವ ವ್ಯವಸ್ಥೆ ಭಾರತೀಯ ಜನತಾ ಪಾರ್ಟಿಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ನೂತನ ಕೃಷಿ ಕಾಯ್ದೆ ಸತ್ಯ-ಮಿಥ್ಯ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಕಾಯ್ದೆಗಳನ್ನು ವಿರೋಧಿಸುವ ದೊಡ್ಡ ಗುಂಪು ಇದೆ. ಅವರಿಗೆ ಉತ್ತರ ಕೊಡುವ ಶಕ್ತಿ ನಮ್ಮ ಭಾರತೀಯ ಜನತಾ ಪಕ್ಷಕ್ಕಿದೆ. ಹಾಗಾಗಿ, ಪ್ರತಿ ಕಾರ್ಯಕರ್ತರು ಕೃಷಿ ಕಾಯ್ದೆಗಳು ರೈತರಿಗೆ ಮಾರಕವಲ್ಲ, ಪೂರಕ ಎಂಬುದನ್ನು ಅವರಿಗೆ ಅಂಕಿ-ಅಂಶಗಳ ಮೂಲಕ ಮನವರಿಕೆ ಮಾಡಿ ಕೊಡಬೇಕು ಎಂದರು.
ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ವಿದೇಶಗಳೇ ಮೆಚ್ಚುವಂತ ಕಾಯ್ದೆಗಳನ್ನು ಮೋದಿಯವರ ನೇತೃತ್ವದ ಸರ್ಕಾರ ಜಾರಿ ಮಾಡಿದೆ. ನಮ್ಮ ಸರ್ಕಾರ ಯಾವುದೇ ಒಳ್ಳೆ ಕೆಲಸ ಮಾಡಿದರೂ ವಿರೋಧಿಸುವ ದೊಡ್ಡ ಗುಂಪು ಇದೆ. ಈ ಹಿಂದಿನ ಲಸಿಕೆ ವಿಚಾರ, ರಾಮ ಮಂದಿರ ನಿರ್ಮಾಣ ವಿಚಾರ ಹಾಗೂ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಾರೆ. ಹಾಗಾಗಿ, ಅವರಿಗೆ ಉತ್ತರ ಕೊಡುವ ಶಕ್ತಿ ನಮಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಅಶೋಕ್ ನಾಯ್ಕ, ಕುಮಾರ ಬಂಗಾರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.