ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಪ್ಪಿಸಲು ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಇಂದು ನಡೆದ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸ್ಥಿತಿಗತಿ ಹಾಗೂ ಅಲ್ಲಿನ ಅವ್ಯವಸ್ಥೆಗಳ ಕುರಿತು ಚರ್ಚಿಸಿದರು. ಜಿಲ್ಲೆಯಲ್ಲಿ ನಕಲಿ ವೈದ್ಯರಿಂದ ಜನರಿಗೆ ತೊಂದರೆ ಆಗುತ್ತಿದ್ದು, ಸಾವಿನ ಪ್ರಮಾಣ ಹೆಚ್ಚುತ್ತಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಡೋಸ್ ನೀಡುವ ಮೂಲಕ ಔಷಧಗಳಿಗೆ ದಾಸರಾಗುವ ಹಾಗೂ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಹೆಚ್ಚಿದೆ. ಈ ಕುರಿತಾಗಿ ಅಧಿಕಾರಿಗಳು ನಿರ್ಲಕ್ಷ್ಯ ಬಿಡಬೇಕು ಎಂದರು.
ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಭ್ರೂಣಲಿಂಗ ಪತ್ತೆ ಕುರಿತಾಗಿ ಅಧಿಕಾರಿಗಳು ಖುದ್ದು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಂತಹ ಸಂಸ್ಥೆಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ವೈದ್ಯರ ಸಲಹೆ ಇಲ್ಲದಂತೆ ಮಾರುಕಟ್ಟೆಯಲ್ಲಿ ದೊರೆಯುವ ಗರ್ಭಪಾತದ ಮಾತ್ರೆಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಹಾಗೂ ಸಂಭವಿಸಬಹುದಾದ ಸಾವಿನ ಬಗ್ಗೆ ಸಹ ಜಾಗ್ರತಿ ಮೂಡಿಸುವ ಕಾರ್ಯವಾಗಬೇಕಿದೆ. ವೈದ್ಯರ ಚೀಟಿ ಇಲ್ಲದೇ ಔಷಧಗಳನ್ನು ನೀಡುವ ಮಳಿಗೆಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದರು.
ಆಸ್ಪತ್ರೆಗಳಲ್ಲಿನ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೇ ಸೂಜಿಗಳ ಸಮೇತ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವುದು ಹಾಗೂ ಸುಡುವುದು ಗಮನಕ್ಕೆ ಬಂದಿದ್ದು, ಈ ಕುರಿತು ಶಿಘ್ರವಾಗಿ ಕ್ರಮಕೈಗೊಳ್ಳಬೇಕು. ಆಸ್ಪತ್ರೆಗಳಲ್ಲಿ ಅವ್ಯವಸ್ಥೆಗಳ ಕುರಿತು ಸಿಬ್ಬಂದಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಬೇಡಿಕೆ ಇಡಬೇಕು. ಮಾಹಿತಿ ನೀಡದೇ ಮೌನವಹಿಸಿದರೆ ಅಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಸಮಸ್ಯೆ ತಿಳಿಯುವುದು ಹೇಗೆ. ಆದ್ದರಿಂದ ಸಿಬ್ಬಂದಿಗಳು ಅಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಸಮಸ್ಯೆಗಳನ್ನು ಗಮನಕ್ಕೆ ತರುವಂತೆ ತಿಳಿಸಿದರು.
ಈ ಸಭೆಯಲ್ಲಿ ಸಿಇಒ ಕೆ. ಶಿವರಾಮೇಗೌಡ ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.