ಶಿವಮೊಗ್ಗ: ತಾಯಿಯ ಜೊತೆಗಿರುವ ಮುದ್ದು ಕಂದಮ್ಮನಿಗೆ ಹುಟ್ಟಿನಿಂದಲೇ ಕಣ್ಣಿನ ಕ್ಯಾನ್ಸರ್ ಬಾಧಿಸಿದೆ. ನಾಲ್ಕು ತಿಂಗಳಿರುವಾಗಲೇ ಕಣ್ಣಿನ ಸಮಸ್ಯೆಯನ್ನು ಪೋಷಕರು ಗುರುತಿಸಿ, ವೈದ್ಯರಿಗೆ ತೋರಿಸಿದ್ದಾರೆ. ಮಣಿಪಾಲಕ್ಕೆ ತೆರಳಿ ಅಲ್ಲಿನ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ವೈದ್ಯರು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಪರೀಕ್ಷಿಸುವಂತೆ ಸೂಚಿಸಿದ್ದರು. ಅಲ್ಲಿಗೂ ಹೋಗಿ ಪರೀಕ್ಷಿಸಿದಾಗ ಮಗುವಿನ ಕಣ್ಣಿನಲ್ಲಿ ಕ್ಯಾನ್ಸರ್ ಇರುವುದು ಕಂಡು ಬಂದಿದೆ.
ಅಂದ ಹಾಗೆ ಈ ಮುದ್ದು ಮಗುವಿನ ಹೆಸರು ಮನ್ವಿತ. ಸಾಗರ ತಾಲೂಕು ಯಡೇಹಳ್ಳಿಯ ಮಂಜಿರೆ ಗ್ರಾಮದ ಘಂಟಿನಕೊಪ್ಪನ ನಿವಾಸಿಗಳಾದ ನಾಗರಾಜ್ ಹಾಗೂ ವಿದ್ಯಾ ದಂಪತಿಯ ಏಕೈಕ ಪುತ್ರಿ. ಮನ್ವಿತ ಹುಟ್ಟಿದಾಗಿನಿಂದಲೂ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಳು. ಈಕೆಯ ಎಡಗಣ್ಣಿನಿಂದ ಮಗು ನೋಡುತ್ತಿರಲಿಲ್ಲ. ವಸ್ತುಗಳನ್ನು ಸರಿಯಾಗಿ ಗುರುತಿಸಲೂ ಆಗುತ್ತಿರಲಿಲ್ಲ. ಇದರಿಂದ ವೈದ್ಯರ ಬಳಿ ಪರೀಕ್ಷಿಸಿದಾಗ ಮನ್ವಿತಳ ಎಡಗಣ್ಣಿನಲ್ಲಿ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ. ಇದು ಮಗುವಿನ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಕ್ಯಾನ್ಸರ್ ರೋಗದಿಂದಾಗಿ ಮಗು, ಪೋಷಕರು ಸಂಕಷ್ಟಕ್ಕೀಡಾಗಿದ್ದಾರೆ. ಈಗ ಎಡಗಣ್ಣಿನಲ್ಲಿರುವ ಕಣ್ಣಿನ ಕ್ಯಾನ್ಸರ್ಗೆ ಸರಿಯಾದ ಚಿಕಿತ್ಸೆ ನೀಡದೆ ಹೋದರೆ, ಅದು ಬಲಗಣ್ಣಿಗೂ ಹರಡುವ ಸಾಧ್ಯತೆ ಇರುವುದರಿಂದ ಇದಕ್ಕೆ ಸೂಕ್ತವಾದ ಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಮನ್ವಿತಾಳಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನ್ವಿತಾಳ ತಂದೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಬೆಂಗಳೂರಿಗೆ ಹೋಗಿ ಬರಲು ಯಾವುದೇ ಹಣಕಾಸಿನ ಸೌಲಭ್ಯಗಳು ಇಲ್ಲ. ಮಗಳ ಚಿಕಿತ್ಸೆಗೆ ಹಣ ಖರ್ಚು ಮಾಡಿ ಕುಟುಂಬವೇ ನಲುಗಿ ಹೋಗಿದೆ. ತೊಂದರೆಯಿಂದ ಮಗುವಿಗೆ ಪ್ರತಿ ತಿಂಗಳು ವೈದ್ಯರಿಗೆ ತೋರಿಸಲು ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣಕಾಸಿನ ಸಮಸ್ಯೆ ಆಗುತ್ತಿದೆ. ಇದರಿಂದ ಮನ್ವಿತಾ ಕುಟುಂಬಸ್ಥರು ಮಗಳ ಚಿಕಿತ್ಸೆಗಾಗಿ ದಾನಿಗಳ ಹಣಕಾಸಿನ ಸಹಕಾರ ಕೋರಿದ್ದಾರೆ. ದಾನಿಗಳು ಕೆನರಾ ಬ್ಯಾಂಕ್ ಖಾತೆ ನಂಬರ್ 03412610001042 ಕ್ಕೆ ಹಣ ಕಳುಹಿಸಿ ಸಹಾಯ ಮಾಡಬಹುದಾಗಿದೆ.
ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಮಗುವಿನ ಶವ ಹಿಡಿದುಕೊಂಡು 10 ಕಿ.ಮೀ ನಡೆದೇ ಸಾಗಿದ ತಾಯಿ!