ಶಿವಮೊಗ್ಗ : ಸಿಎಂ ಬಿ.ಎಸ್ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ಮೇಲೆ ತವರು ಜಿಲ್ಲೆಯ ಜನತೆ ಭಾರೀ ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಈ ಬಾರಿಯದ್ದು ಯಡಿಯೂರಪ್ಪ ಅವರು ಮಂಡಿಸಲಿಸಲಿರುವ ಕೊನೆಯ ಬಜೆಟ್ ಆದರೂ, ಆಗಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಹೀಗಾಗಿ, ಬಜೆಟ್ನಲ್ಲಿ ಸಿಎಂ ತವರು ಜಿಲ್ಲೆಗೆ ಆದ್ಯತೆ ನೀಡುವ ಭರವಸೆ ಜನರಲ್ಲಿದೆ.
ಕಳೆದ ಅವಧಿಯಲ್ಲಿ ಜಿಲ್ಲೆಗೆ ಭರಪೂರ ಕೊಡುಗೆ ನೀಡಿದ್ದ ಯಡಿಯೂರಪ್ಪ: ಯಡಿಯೂರಪ್ಪ ಸಿಎಂ ಆಗುತ್ತಲೆ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿ ಬಿಎಸ್ವೈ ಒತ್ತು ನೀಡಿದ್ದಾರೆ. ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆ ಅಭಿವೃದ್ದಿ, ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಬಸ್ ನಿಲ್ದಾಣ ನಿರ್ಮಾಣ, ಗಾಂಧಿ ಪಾರ್ಕ್ ಅಭಿವೃದ್ದಿ, ತವರು ಕ್ಷೇತ್ರ ಶಿಕಾರಿಪುರದ ಅಭಿವೃದ್ದಿಯ ಜೊತೆಗೆ ಏತ ನೀರಾವರಿಗೆ ಒತ್ತು ನೀಡಿರುವುದು, ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ ರಚನೆ ಹೀಗೆ ಹಲವು ಯೋಜನೆಗಳನ್ನು ಬಿಎಸ್ವೈ ತವರಿಗೆ ನೀಡಿದ್ದಾರೆ.
ಪ್ರಗತಿಯಲ್ಲಿರುವ ಕಾಮಗಾರಿಗಳು : ಶಿವಮೊಗ್ಗ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ, ನೂತನ ಸೇತುವೆ ನಿರ್ಮಾಣ, ರಿಂಗ್ ರಸ್ತೆ ಕಾಮಗಾರಿ, ಜೋಗ ಜಲಪಾತ ಅಭಿವೃದ್ದಿ, ಶಿವಮೊಗ್ಗ ಹುಲಿ- ಸಿಂಹಧಾಮ ಅಭಿವೃದ್ದಿ, ವಿಮಾನ ನಿಲ್ದಾಣ ಕಾಮಗಾರಿ ಪುನಃ ಪ್ರಾರಂಭ, ಸಹ್ಯಾದ್ರಿ ಕಾಲೇಜು ಕ್ರೀಡಾಂಗಣ ಅಭಿವೃದ್ದಿ, ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣ ಹೀಗೆ ಹಲವು ಯೋಜನೆಗಳನ್ನು ಸದ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಕಾಮಗಾರಿಗಳ ಮೇಲೆ ಸ್ವತಃ ಸಿಎಂ ನಿಗಾ ವಹಿಸಿದ್ದಾರೆ.
ಜಿಲ್ಲೆಯ ಜನತೆಯ ನಿರೀಕ್ಷೆಗಳು : ಸಿಎಂ ಯಡಿಯೂರಪ್ಪ ಸ್ವತಃ ಆರ್ಥಿಕ ಇಲಾಖೆಯನ್ನು ಹೊಂದಿರುವುದರಿಂದ ಜಿಲ್ಲೆಗೆ ಬಂಪರ್ ಕೂಡುಗೆ ನೀಡಬಹುದು ಎನ್ನಲಾಗಿದೆ. ಕಳೆದ ಭಾರಿ ನೀಡಿದ ಯೋಜನೆಗಳ ಕಾಮಗಾರಿ ಮುಂದುವರೆಸಲು ಹಣ ಬಿಡುಗಡೆ ಮಾಡುವುದು ಸೇರಿದಂತೆ, ಈ ಬಾರಿಯ ಬಜೆಟ್ ಮೇಲೆ ಜನರು ಹತ್ತು ಹಲವು ನಿರೀಕ್ಷೆಗಳನ್ನು ಹೊಂದಿದ್ದಾರೆ.
ಸಿಎಂ ಇರುವ ತನಕ ಜಿಲ್ಲೆಗೆ ಪ್ರತಿನಿತ್ಯ ಬಜೆಟ್ : ಸಿಎಂ ಬಿಎಸ್ವೈ ಶಿವಮೊಗ್ಗ ಜಿಲ್ಲೆಯವರೆ ಆಗಿರುವುದರಿಂದ, ಜಿಲ್ಲೆಗೆ ಪ್ರತಿನಿತ್ಯ ಬಜೆಟ್ ಆಗಿದೆ. ಸಿಎಂ ಬಜೆಟ್ ನಲ್ಲಿ ಘೋಷಣೆ ಮಾಡದ ಅನೇಕ ಯೋಜನೆಗಳನ್ನು ಜಿಲ್ಲೆಗೆ ನೀಡಿದ್ದಾರೆ. ಹಾಗಾಗಿ ಈ ಬಾರಿಯ ಬಜೆಟ್ನಲ್ಲಿ ಕೂಡ ನೂತನ ಪಶು ವಿಶ್ವವಿದ್ಯಾನಿಲಯ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಜಿಲ್ಲೆಯಲ್ಲಿ ಕಂದಾಯ ವಿಭಾಗವಾಗಿ ಅಯುಕ್ತರ ಕಚೇರಿ ನಿರ್ಮಾಣ ಮಾಡುವುದು, ಕೈಗಾರಿಕೆಗಳಿಗೆ ಒತ್ತು ನೀಡುವುದು ಸೇರಿದಂತೆ ಇನ್ನೂ ಹಲವು ನಿರೀಕ್ಷೆಗಳನ್ನು ಜನ ಬಜೆಟ್ ಮೇಲೆ ಇಟ್ಟುಕೊಂಡಿದ್ದಾರೆ. ಇವೆಲ್ಲದಕ್ಕೆ ಸಿಎಂ ಬಜೆಟ್ನಲ್ಲಿ ಯಾವ ರೀತಿ ಆದ್ಯತೆ ನೀಡಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ.