ಶಿವಮೊಗ್ಗ: ಹಿಂದುತ್ವದ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿ ಮೋಸ ಮಾಡುವುದೇ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಕೆಲಸ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ನೀಡುವುದಾಗಿ ಪ್ರಮಾಣ ಮಾಡಿದ್ದರು. ಆದರೆ ಟಿಕೆಟ್ ನೀಡಲಿಲ್ಲ. ತಮ್ಮ ಮಗನಿಗೆ ಸಂಸದ ಸ್ಥಾನಕ್ಕೆ ಟಿಕೆಟ್ ನೀಡುವುದಿಲ್ಲ ಎಂದು ಆಣೆ ಮಾಡಿದ್ದರು. ಆದರೆ ರಾಘವೇಂದ್ರಗೆ ಟಿಕೆಟ್ ನೀಡಿದರು.ಇದಾದ ಬಳಿಕ ಕೆಜೆಪಿ ಪಕ್ಷ ಕಟ್ಟಿ ಸತ್ತರೂ ಬಿಜೆಪಿಗೆ ಬರುವುದಿಲ್ಲ ಎಂದು ಹೇಳಿದರು. ಆದರೆ ಯಡಿಯೂರಪ್ಪ ಬಿಜೆಪಿಗೆ ಬಂದಿದ್ದಾರೆ. ರಾಘವೇಂದ್ರ ಅವರಿಂದ ಆಣೆ ಮಾಡಿ ಮೋಸ ಮಾಡುವುದನ್ನು ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲಿದ್ದಾಗ ನಾನು ಚಡ್ಡಿಯೊಂದನ್ನು ಹಾಕಲಿಲ್ಲ. ಆರ್ಎಸ್ಎಸ್ ಚಡ್ಡಿ ಸಣ್ಣಗೆ ಇದ್ದದ್ದರಿಂದ ಡಿಸ್ಕೋ ರೀತಿ ಕಾಣುತ್ತದೆ ಎಂದು ನಾನು ಚಡ್ಡಿ ಹಾಕಲಿಲ್ಲ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾದ ಕ್ಷಣ ಸಾಗರ ಭಾಗದ ಜನರಲ್ಲಿ ಆತಂಕ ನಿರ್ಮಾಣವಾಗುತ್ತದೆ. ಇದೀಗ ಮತ್ತೆ ಶಿಕಾರಿಪುರವನ್ನು ಜಿಲ್ಲೆಯಾಗಿ ಮಾಡಬೇಕು ಎಂಬ ಉದ್ದೇಶದಿಂದ ಸಾಗರದಲ್ಲಿದ್ದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಶಿಕಾರಿಪುರಕ್ಕೆ ಶಿಫ್ಟ್ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅರಾಮಾಗಿ ಇರುವುದು ಕೇವಲ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ವಿಜಯೇಂದ್ರ ಮಾತ್ರ. ಯಡಿಯೂರಪ್ಪ ಇನ್ನು ಆರು ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬುದು ವಿಜಯೇಂದ್ರಗೆ ತಿಳಿದಿದೆ. ಹೀಗಾಗಿ ತಾನೇ ಸೂಪರ್ ಸಿಎಂ ಆಗಿ ದುಡ್ಡು ಮಾಡಲು ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.