ಶಿವಮೊಗ್ಗ : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಶಿವಮೊಗ್ಗ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪ ಇಂದು ನಗರದ ಆರ್ಎಸ್ಎಸ್ ಕಾರ್ಯಾಲಯದಲ್ಲಿ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷದ ಸಂಘಟನೆ ಹಾಗೂ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ, ಅನಿರ್ವಾಯವಾಗಿ ಇವತ್ತೇ ಹೋಗುತ್ತಿದ್ದೇನೆ. ಬಹಳ ದಿನ ಆಗಿತ್ತು. ಈಗ ನಮ್ಮ ಪರಿವಾರದ ಹಿರಿಯರ ಜೊತೆ ಸೇರಿ ಮಾತನಾಡಿಲು ಇಂದು ಸೇರಿದ್ದೆವು. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಏನೇನು ಮಾಡಿದ್ದೇವೆ, ಮತ್ತೇನು ಮಾಡಬೇಕು ಎನ್ನುವ ಸಲಹೆಯನ್ನು ಪರಿವಾರದ ಹಿರಿಯರಿಂದ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದರು.
ಒಬ್ಬನೇ ಪ್ರವಾಸ ಮಾಡುವ ಪ್ರಶ್ನೆ ಇಲ್ಲ : ಗಣಪತಿ ಹಬ್ಬದ ನಂತರ ಪಕ್ಷದ ರಾಜ್ಯಾಧ್ಯಕ್ಷರು,ಮಂತ್ರಿಗಳು,ಶಾಸಕರು ಸೇರಿ ರಾಜ್ಯ ಪ್ರವಾಸ ಮಾಡ್ತೇವೆ, ಒಬ್ಬನೇ ಪ್ರವಾಸ ಮಾಡುವ ಪ್ರಶ್ನೆಯೇ ಇಲ್ಲಾ ಎಂದು ಯಡಿಯೂರಪ್ಪ ಹೇಳಿದರು. ಪಕ್ಷದ ಹಿರಿಯರ ಜೊತೆ ಹಾಗೂ ರಾಜ್ಯಾಧ್ಯಕ್ಷರ ಜೊತೆ ಮಾತಾಡಿ ನಾನು ಪಕ್ಷದ ಅಧ್ಯಕ್ಷರು,ಮಂತ್ರಿಗಳು, ಶಾಸಕರು ಎಲ್ಲಾ ಸೇರಿ ಗಣಪತಿ ಹಬ್ಬದ ನಂತರ ರಾಜ್ಯ ಪ್ರವಾಸ ಮಾಡುತ್ತೇವೆ.
ಒಬ್ಬನೇ ರಾಜ್ಯ ಪ್ರವಾಸ ಹೋಗುವ ಪ್ರಶ್ನೆಯೇ ಇಲ್ಲ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾತನಾಡಿದ ಅವರು, ವಿರೋಧಕ್ಕೆ ಅರ್ಥ ಇಲ್ಲ, ಬಹಳ ಮುಂದಾಲೋಚನೆ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದೇವೆ. ಹಾಗಾಗಿ, ಈ ಬಗ್ಗೆ ಗೊಂದಲ ಇಲ್ಲ ಎಂದು ತಿಳಿಸಿ ಬೆಂಗಳೂರಿಗೆ ತೆರಳಿದರು.
ಕಟ್ಟಡದ ಸಂಪೂರ್ಣ ಉಪಯೋಗವಾಗಲಿ : ಕಟ್ಟಡ ನಿರ್ಮಾಣದಷ್ಟೇ ಅದರ ಸಂಪೂರ್ಣ ಉಪಯೋಗವಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ತಮ್ಮ ಸ್ವ ಕ್ಷೇತ್ರ ಶಿಕಾರಿಪುರದ ಶಿವಮೊಗ್ಗ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾದ ಬಾಬು ಜಗಜೀವನರಾಮ್ ಭವನ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ಹೆಚ್ಚುವರಿ ಕಟ್ಟಡಗಳ ಉದ್ಟಾಟನೆ ಹಾಗೂ ತಾಲೂಕು ಮಟ್ಟದ ಡಿ.ದೇವರಾಜ ಅರಸು ಭವನ ಶಂಕು ಸ್ಥಾಪನೆ ನೆರವೇರಿಸಿದ್ರು. ನಂತರ ಶಿಕಾರಿಪುರ ಹೊರ ವಲಯದ ಶಾಯಿ ಗಾರ್ಮೆಂಟ್ಸ್ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಂಸದ ಬಿ ವೈ ರಾಘವೇಂದ್ರ ಸೇರಿ ಇತರರಿದ್ದರು.