ಶಿವಮೊಗ್ಗ: ಜಿಲ್ಲೆಯಲ್ಲಿ ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿವೆ.
ಇಂತಹ ಸಂದರ್ಭದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಆರೋಗ್ಯ ಇಲಾಖೆಯ ಸಿಬ್ಬಂದಿಯ ವರ್ತನೆ ಅಕ್ಷಮ್ಯ ಅಪರಾಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಸೀಮ್ಸ್ ಆಡಳಿತಾಧಿಕಾರಿಗಳು ಹಾಗೂ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತವಾಗಿರುವ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನಾ ಸಭೆಯನ್ನು ಸಚಿವರು ನಡೆಸಿದರು.
ಸಚಿವರು ಕರೆದಿದ್ದ ಮಹತ್ವದ ಸಭೆಗೆ ಗೈರಾಗಿದ್ದ ವೈದ್ಯಾಧಿಕಾರಿಗಳ ವಿರುದ್ಧ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಗರಂ ಆದರು. ಸಭೆಗೆ ಗೈರಾಗಿರುವ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸಿಮ್ಸ್ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಫ್ಟ್ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಡಿ ಗ್ರೂಪ್, ನರ್ಸ್ ಮತ್ತು ಇತರೆ ವಿಭಾಗಗಳ ಸಿಬ್ಬಂದಿಯ ಹಾಜರಾತಿಯನ್ನು ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಗಮನಿಸಬೇಕು ಹಾಗೂ ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳು ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಸರ್ಕಾರದ ಭಾಗವಾಗಿರುವ ಸಚಿವರು ಕರೆದಿರುವ ಮಹತ್ವದ ಸಭೆಗೆ ಗೈರಾಗಿರುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು, ಕೋವಿಡ್ ಸೋಂಕಿತರನ್ನು ನೋಡಲು ಆಗಮಿಸುವ ಸಂಬಂಧಿಕರು ರೋಗಿಯನ್ನು ನೋಡಲು ಹೋಗುವ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸುವುದು ಕಡ್ಡಾಯವಾಗಿದೆ. ದಿನಕ್ಕೆ 3 ಬಾರಿ ರೋಗಿಯನ್ನು ಸಂದರ್ಶಿಸುವ ವ್ಯಕ್ತಿಗಳು ಬಳಸಿರುವ ಪಿಪಿಇ ಕಿಟ್ಗಳನ್ನೆ ಬಳಸುತ್ತಿರುವ ಆತಂಕವಿದೆ.
ಹಾಗಾಗಿ, ಸಾರ್ವಜನಿಕರಿಗೆ ಸರಳವಾಗಿ ಸುಲಭವಾಗಿ ಕಡಿಮೆ ಬೆಲೆಯಲ್ಲಿ ಪಿಪಿಇ ಕಿಟ್ ದೊರೆಯುವಂತೆ ಕ್ರಮಕೈಗೊಳ್ಳಿ ಎಂದು ತಿಳಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ರುದ್ರೇಗೌಡ, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಡಿ ಎಸ್ ಅರುಣ್, ಸಿಮ್ಸ್ ಆಡಳಿತಾಧಿಕಾರಿ ಡಾ. ಸಿದ್ದಪ್ಪ, ಡಿಹೆಚ್ಒ ರಾಜೇಶ್ ಸುರಗಿಹಳ್ಳಿ ಸೇರಿದಂತೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.