ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಈಸೂರು ಹೋರಾಟಗಾರರ ಸ್ಮಾರಕ ಭವನದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನೆರವೇರಿಸಿದರು.
ದೇಶದಲ್ಲೇ ಮೊದಲ ಸ್ವಾತಂತ್ರ್ಯ ಘೋಷಿಸಿಕೊಂಡ ಈಸೂರಿನ ಹೋರಾಟಗಾರರ ಸ್ಮಾರಕವನ್ನು ಅಂದಾಜು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಸಚಿವರಾದ ಬಿ.ಸಿ.ಪಾಟೀಲ್, ಸುನೀಲ್ ಕುಮಾರ್, ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಆರ್ಯವೈಶ್ಯ ನಿಗಮದ ಅಧ್ಯಕ್ಷರಾದ ಡಿ.ಎಸ್.ಅರುಣ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ, ಕಾಡಾ ಅಧ್ಯಕ್ಷರು ಪವಿತ್ರ ರಾಮಯ್ಯ, ಸೂಡಾ ಅಧ್ಯಕ್ಷರು ಜ್ಯೋತಿ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈಸೂರನ್ನು ಮಾದರಿ ಗ್ರಾಮವನ್ನಾಗಿ ಮಾಡುತ್ತೇವೆ:
ಇದೇ ವೇಳೆ ಮಾತನಾಡಿದ ಬಿಎಸ್ವೈ, ದೇಶದಲ್ಲೇ ಮೊದಲ ಬಾರಿಗೆ ಸ್ವತಂತ್ರ ಘೋಷಿಸಿಕೊಂಡ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಹೋರಾಟ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿರಬೇಕು ಎಂದು ಹೇಳಿದರು.
ಇಂದಿನ ಯುವ ಜನತೆಗೆ ಅವರ ಹೋರಾಟ ಸ್ಫೂರ್ತಿಯಾಗಬೇಕು ಎಂಬ ಕಾರಣದಿಂದಲೇ ಈ ಸ್ಮಾರಕ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. ಬರುವಂತಹ ಒಂದು ವರ್ಷದೊಳಗೆ ಈ ಸ್ಮಾರಕ ಕಾಮಗಾರಿ ಮುಗಿಸಿ ಈಸೂರು ಗ್ರಾಮಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ದೇಶದಲ್ಲಿ ಯಾರಾದರೂ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬರೆಯಲು ಪ್ರಾರಂಭಿಸಿದರೆ ಈಸೂರನ್ನು ಸ್ಮರಿಸದೇ ಇತಿಹಾಸ ಬರೆಯಲು ಸಾದ್ಯವಿಲ್ಲ. ಅಂತಹ ಹೋರಾಟದ ನೆಲ ಈಸೂರು ಎಂದರು.
ಅಲ್ಲದೇ, ಸ್ವತಂತ್ರ ಹೋರಾಟಗಾರರನ್ನು ಹಾಗೂ ರಾಷ್ಟ್ರಕವಿ ಶಿವರುದ್ರಪ್ಪ ನವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಮರಿಸಿದರು.