ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ನಗರ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಮಳೆ ನೀರು ಹರಿಯದೆ ಹಾಗೆ ನಿಲ್ಲುವ ಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.
ಇಲ್ಲಿ ಇರುವ ಎರಡು ಶೌಚಾಲಯಗಳ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸಿದರು. ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು. ಸಂಜೆ ಆಗುತ್ತಲೆ ತಿಂಡಿ ಗಾಡಿಗಳು ನಿಲ್ದಾಣದ ಒಳಗೆ ಬಂದು ಗಲೀಜು ಮಾಡುತ್ತವೆ. ಇದರಿಂದ ನಿಲ್ದಾಣದಲ್ಲಿ ಸ್ವಚ್ಚತೆ ಇಲ್ಲದಂತೆ ಆಗಿದೆ. ಬಸ್ ನಿಲ್ದಾಣದ ಒಳಗೆ ಇರುವ ದೇವಾಲಯದ ಬಳಿ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವ ಕುರಿತು ಸಚಿವರ ಗಮನಕ್ಕೆ ತರಲಾಯಿತು. ಇದೇ ವೇಳೆ ಖಾಸಗಿ ಬಸ್ ಮಾಲೀಕರ ಹಾಗೂ ಬಸ್ ಏಜೆಂಟ್ರ ಸಂಘದ ವತಿಯಿಂದ ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಒಂದು ಲಕ್ಷ ರೂ. ಚೆಕ್ನ್ನು ಸಚಿವರಿಗೆ ನೀಡಿದರು.
ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳು ಬಸ್ ನಿಲ್ದಾಣ ಸಂಘದವರ ಜೊತೆ ಸೇರಿ ಸಭೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು. ಈ ವೇಳೆ ಉಪಮೇಯರ್ ಚನ್ನಬಸಪ್ಪ , ಆಯುಕ್ತರಾದ ಚಿದಾನಂದ್, ಎಸ್ಪಿ ಶಾಂತರಾಜು ಸೇರಿದಂತೆ ಬಸ್ ಎಜೆಂಟ್ ಸಂಘದ ಪಧಾಧಿಕಾರಿಗಳು ಹಾಜರಿದ್ದರು.