ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ಸಿದ್ಧರಾಮಯ್ಯ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಈಶ್ವರಪ್ಪ, ಸಿದ್ದರಾಮಯ್ಯ ಮೊದ್ಲು ವಿರೋಧ ಪಕ್ಷದ ನಾಯಕರಾಗಲಿ. ಸಿಎಂ ಆಗಿದ್ದ ಸಂದರ್ಭದಲ್ಲಿ ಬರಗಾಲ ಪೀಡಿತ ಪ್ರದೇಶಕ್ಕೆ ಹೋಗಿದ್ರಾ? ಬಾದಾಮಿ ಕ್ಷೇತ್ರದ ಶಾಸಕರಾಗಿರೋ ಅವ್ರು ತಮ್ಮ ಕ್ಷೇತ್ರಕ್ಕೆ ಹೋಗಿದ್ರಾ? ಅನಾರೋಗ್ಯ ಕಾರಣ ಹೇಳಿಕೊಂಡು ಎಐಸಿಸಿ ಮೀಟಿಂಗ್ ಹೋಗೋಕಾಗುತ್ತೆ ಪ್ರವಾಹ ಪ್ರದೇಶಕ್ಕೆ ಹೋಗೋಕಾಗೋಲ್ವಾ? ಎಂದು ಸಿದ್ದು ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.
ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಅವ್ರು ಯಡಿಯೂಪ್ಪ ಅವ್ರಿಗೆ ವಯಸ್ಸಾಗಿದೆ ಅಂತಾರೆ, ಹಾಗಿದ್ರೆ ಇವ್ರಿಗೆ ವಯಸ್ಸು ಆಗಿಲ್ವಾ? ಅವರ ಅಪ್ಪನಿಗೆ ವಯಸ್ಸು ಆಗಿಲ್ವಾ? ಕುಮಾರಸ್ವಾಮಿ ಅವರು ನೆರೆ ಪ್ರದೇಶಕ್ಕೆ ಭೇಟಿ ನೀಡ್ತಿದ್ದಾರೆ, ಅದನ್ನ ಸ್ವಾಗತಿಸುತ್ತೇನೆ. ಜೊತೆಗೆ ಸರ್ಕಾರಕ್ಕೆ ಸಲಹೆ ಕೊಟ್ಟರೇ ಅದನ್ನು ಕೂಡ ಸ್ವೀಕಾರ ಮಾಡ್ತೇವೆ ಎಂದಿದ್ದಾರೆ.
ಹಾಗೆ ಸಿದ್ದರಾಮಯ್ಯ ಮೊದ್ಲು ಬಾದಾಮಿಗೆ ಹೋಗಲಿ, ಹಾಗೇ ರಾಜ್ಯ ಪ್ರವಾಸ ಮಾಡ್ಲಿ. ವಿರೋಧ ಪಕ್ಷದ ನಾಯಕರಾಗಲು ಹೊರಟ್ಟಿದ್ದಾರೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಕಾಂಗ್ರೆಸ್ ಪಕ್ಷದ ಹೆಚ್ ಕೆ ಪಾಟೀಲ್‌ರೂ ಸ್ವಲ್ಪ ಓಡಾಡ್ತಿದ್ದಾರೆ ಅಷ್ಟೇ.. ಇನ್ನುಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಿದೆ. ರಾಜ್ಯದ ಜನ ಪ್ರವಾಹದಿಂದ ಒದ್ದಾಡ್ತಾ ಇದ್ದಾರೆ. ಇಂಥಹ ಸಂದರ್ಭದಲ್ಲಿ ರಾಜಕಾರಣ ಮಾಡೋದಲ್ಲಾ.. ನಮಗೂ ರಾಜಕಾರಣ ಮಾಡೋಕೆ ಬರುತ್ತೆ. ಯಾವಾಗ ಮಾಡಬೇಕೋ ಆಗ ಮಾಡ್ತೇವೆ. ಆದರೆ, ಈಗ ಎಲ್ಲಾ ಪಕ್ಷದವರು ಒಟ್ಟಿಗೆ ಸೇರಿ ಪರಿಹಾರ ಹುಡುಕೋಣ ಎಂದು ಈಶ್ವರಪ್ಪ ಹೇಳಿದ್ದಾರೆ.