ಶಿವಮೊಗ್ಗ: ಯಡಿಯೂರಪ್ಪನವರು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದಿದಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಡಿಯೂರಪ್ಪನವರು ತಂತಿ ಮೇಲಿನ ನಡಿಗೆ ನನ್ನದು ಎಂದಿದ್ದು ಜನರ ಕಷ್ಟ ನೋಡಿಯೇ ಹೊರತು, ಬೇರಾವುದಕ್ಕೂ ಅಲ್ಲ ಎಂದು ಟಗರು ವಿರುದ್ದ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಸರ್ಕಾರದ ಆಡಳಿತ ನೋಡಲಾಗದೆ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟರೆ ನೀವು ಸಿಎಂ ಆಗಬಹುದುಬ ಎಂಬ ಆಸೆ ಬಿಡಿ. ನಿಮಗೆ ವಿರೋಧ ಪಕ್ಷದ ನಾಯಕ ಸ್ಥಾನವೂ ದೊರೆತಿಲ್ಲ. ಯಡಿಯೂರಪ್ಪನವರು ತಂತಿ ಮೇಲೆ ನಡೀತಿದ್ರೆ ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಆ ತಂತಿ ಬೇಲಿಯನ್ನು ಹಾರಿ ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ನಿಮ್ಮ ಪಕ್ಷವನ್ನು ಮೊದಲು ನೀವು ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ದ ಕೆಂಡಕಾರಿದ್ದಾರೆ.
ಮಾಧ್ಯಮಗಳ ಮೇಲೆ ಈಶ್ವರಪ್ಪ ಗರಂ: ಯುಟಿ ಖಾದರ್ ವಿಚಾರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೆ ಅಷ್ಟೇ.. ಸಂಘಟನೆಗಿಂತ ದೊಡ್ಡದು ಯಾವುದು ಇಲ್ಲ ಎಂದು ಹೇಳುವಾಗ. ಯಡಿಯೂರಪ್ಪನವರ ಹೆಸರನ್ನು ಹೇಳಿದ್ದು ನಿಜ. ಆದರೆ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೆಸರು ಬಿಟ್ಟು. ಯಡಿಯೂರಪ್ಪನವರನ್ನು ಮಾತ್ರ ಮಾಧ್ಯಮಗಳು ಸುದ್ದಿ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಹಾಗೂ ಯಡಿಯೂರಪ್ಪನವರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಚುನಾವಣೆ ನಡೆದರೆ 150ಕ್ಕೂ ಅಧಿಕ ಸ್ಥಾನ ಬಿಜೆಪಿ ಗೆಲ್ಲಲಿದೆ. ಬಿಎಸ್ವೈ ಹಾಗೂ ಸಂಘಟನೆ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.