ಶಿವಮೊಗ್ಗ: ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಆದರೆ, ಅರಣ್ಯ ಇಲಾಖೆಯ ಆರ್ಎಫ್ಒವೊಬ್ಬರು ಇಲಾಖೆಯ ದಿನಗೂಲಿ/ಪಿಸಿಪಿ ನೌಕರರನ್ನು ತನ್ನ ಸ್ವಂತ ಜಮೀನಿನಲ್ಲಿ ಹಾಕಿದ್ದ ಜೋಳ ಕಟಾವು ಮಾಡಲು ಕರೆದು ಕೊಂಡು ಹೋಗಿ ಸಿಕ್ಕಿ ಬಿದ್ದಿದ್ದಾರೆ.
ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ ವಲಯದ ಆರ್‌ಎಫ್‌ಒ ಹೊಳೆಯಪ್ಪನವರು ತಮ್ಮ ಸ್ವಂತ ಜಮೀನಾದ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದ ಜಮೀನಿನಲ್ಲಿ ಜೋಳ ಮುರಿಯಲು ಕರೆದು ಕೊಂಡು ಹೋಗಿದ್ದಾರೆ. ಈ ಕುರಿತು ಸ್ಥಳೀಯರು ವಿಡಿಯೋ ಸಹ ಮಾಡಿ ಕೊಂಡಿದ್ದಾರೆ.
ಈ ವಿಡಿಯೋದಲ್ಲಿ ದಿನಗೂಲಿ ನೌಕರರು ಆರ್‌ಎಫ್‌ಒ ಹೊಳೆಯಪ್ಪನವರು ತಮ್ಮನ್ನು ಕರೆದುಕೊಂಡು ಬಂದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಕೆಲ ಸಿಬ್ಬಂದಿ ಅಲ್ಲಿಂದ ಓಡಿ ಹೋಗಿದ್ದಾರೆ. ಆರ್‌ಎಫ್‌ಒ ಹೊಳೆಯಪ್ಪ ವಿರುದ್ಧ ಭದ್ರಾವತಿಯ ಉಕ್ಕುಂದ ನಿವಾಸಿ ಶಿವಕುಮಾರ್ರವರು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಲಿಖಿತ ದೂರು ನೀಡಿದ್ದಾರೆ.
ಇದರಲ್ಲಿ ಹೊಳೆಯಪ್ಪನವರು ದಿನಗೂಲಿ ನೌಕರರನ್ನು ತಮ್ಮ ಸ್ವಂತ ಕೆಲಸಕ್ಕೆ ಕರೆದುಕೊಂಡು ಹೋಗಿ ಸರ್ಕಾರಕ್ಕೆ ನಷ್ಟ ಹಾಗೂ ಮೋಸವನ್ನು ಮಾಡಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.