ಶಿವಮೊಗ್ಗ: VISL ಕಾರ್ಖಾನೆಯನ್ನು ಉಳಿಸಿಕೊಳ್ಳಲು ಇಂದಿಗೂ ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಕ್ಕಿನ ನಗರ ಭದ್ರಾವತಿ. ಮೈಸೂರು ಮಹಾರಾಜರಿಂದ ಪ್ರಾರಂಭವಾದ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳು ಮುಚ್ಚುವ ಸ್ಥಿತಿಗೆ ಹೋಗ್ತಾ ಇದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡಿವೆ ಎಂದರು.
ರಾಜ್ಯ ಸರ್ಕಾರದಿಂದ ನಡೆಸುವ ಪ್ರಯತ್ನ ಆದರೂ ಸಹ ನಂತರ ನಡೆಸಲು ಆಗದೇ ಕೇಂದ್ರ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾಕ್ಕೆ ಕೊಟ್ಟಿದೆ. ಬಳಿಕ ಕೇಂದ್ರದ ಸರ್ಕಾರಗಳು ನಡೆಸುವ ಪ್ರಯತ್ನ ಮಾಡಿವೆ. ಆದರೆ, ವರ್ಷಕ್ಕೆ ನೂರಾರು ಕೋಟಿ ಬಂಡವಾಳ ಹಾಕಿದರೂ ನಷ್ಟ ಹೆಚ್ಚಾದ ಕಾರಣ 2013ರಲ್ಲಿ ಯುಪಿಎ ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವ ಯತ್ನ ನಡೆದಾಗ ಅದು ನಿಂತಿತು. ವಿಐಎಸ್ಎಲ್ ಅಸೋಸಿಯೇಷನ್ ಜೊತೆ ಮಾತನಾಡಲು ನಾನು ಪ್ರಯತ್ನ ಮಾಡಿದ್ದೆ. ಆದರೆ ಆಗಲಿಲ್ಲ ಎಂದು ಹೇಳಿದರು.
ಖಾಸಗಿ ವ್ಯಾಪಾರಿಗಳನ್ನು ಕರೆಯುವ ಪ್ರಯತ್ನ ಮಾಡಿದರೂ ಕೂಡ ಯಾರು ಆಸಕ್ತಿ ತೋರಲಿಲ್ಲ. ನಾವು ಗಣಿ ನೀಡಿದರೂ ಯಾರೂ ಅದಕ್ಕೆ ಬಂಡವಾಳ ಹಾಕಲು ಮುಂದೆ ಬರಲಿಲ್ಲ. ಎರಡನೇ ಬಾರಿ ಕರೆದರೂ ಯಾರು ಮುಂದೆ ಬರಲಿಲ್ಲ. ಇದನ್ನು ಮುಚ್ಚುವ ಪ್ರಯತ್ನ ಆದರೂ ಕೂಡ ಮನವೊಲಿಸುವ ಕೆಲಸ ಮಾಡಲಾಯಿತು ಎಂದು ರಾಘವೇಂದ್ರ ಹೇಳಿದರು.
ಕಾರ್ಖಾನೆ ಉಳಿಸುವ ಪ್ರಯತ್ನ ಮುಂದುವರೆದಿದೆ : ಕಾರ್ಖಾನೆ ಉಳಿಸಲು ನಾವು ಪ್ರತಿ ಕಚೇರಿ ಮೆಟ್ಟಿಲು ಹತ್ತಿದ್ದೇವೆ. ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆ, ಸರ್ಕಾರದಿಂದ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕಾರ್ಖಾನೆ ಮುಚ್ಚುವ ಪರಿಸ್ಥಿತಿಯು ಕೇವಲ ನಮ್ಮ ಕಾರ್ಖಾನೆಗೆ ಮಾತ್ರ ಅಲ್ಲ. 2018-19 ರಲ್ಲಿ 28 ಕಂಪನಿಯ 84.972 ಕೋಟಿ ರೂವನ್ನು ವಾಪಸ್ ಪಡೆದಿದೆ. 2019-20ರಲ್ಲಿ 15 ಕಂಪನಿಗಳಿಂದ 50 ಸಾವಿರ ಕೋಟಿ ರೂ, 2020-21 ರಲ್ಲಿ 18 ಕಂಪನಿಗಳಿಂದ 32,500 ಸಾವಿರ ಕೋಟಿ, 2021-22 ರಲ್ಲಿ 10 ಕಂಪನಿಗಳಿಂದ 13,500 ಕೋಟಿ ರೂ ಹಿಂಪಡೆಯಲಾಗಿದೆ. ಪ್ರಸ್ತುತ ವರ್ಷದಲ್ಲಿ 8 ಕಂಪನಿಯಿಂದ 32 ಸಾವಿರ ಕೋಟಿ ವಾಪಸ್ ಪಡೆಯಲಾಗಿದೆ.ಇನ್ನು ನಷ್ಟದಲ್ಲಿದ್ದ ಉದ್ಯಮಗಳ ಬಂಡವಾಳ ಹಿಂತೆಗೆತ ಮಾಡಲಾಗಿದೆ ಎಂದು ಹೇಳಿದರು.
ಸ್ಟೀಲ್ ಅಥಾರಟಿ ಆಫ್ ಇಂಡಿಯಾದಿಂದ ಕೇಂದ್ರವು ಶೇ.10 ರಷ್ಟು ಷೇರನ್ನು ವಾಪಸ್ ತೆಗೆದುಕೊಂಡಿದೆ. ಇದರಿಂದ ಸ್ಟೀಲ್ ಅಥಾರಿಟಿಯಲ್ಲಿ ನಷ್ಟ ಉಂಟಾಗಿದೆ. ಇದರಿಂದ ಸೈಲ್ನ ಸಭೆಯಲ್ಲಿ ಕಾರ್ಖಾನೆ ಮುಚ್ಚುವ ತೀರ್ಮಾನಕ್ಕೆ ಬರಲಾಗಿದೆ. ಸದ್ಯ 89 ಕೋಟಿ ರೂ ನಷ್ಟ ಉಂಟಾಗುತ್ತಿದೆ. ಹಾಟ್ ಮೆಟಲ್, ಲಿಕ್ವಿಡ್ ಉತ್ಪಾದನೆ ಆಗದ ಕಾರಣ ನಷ್ಟ ಉಂಟಾಗುತ್ತಿದೆ. ನಾವು ಸಾಕಷ್ಟು ಪ್ರಯತ್ನ ಮಾಡ್ತಾ ಇದ್ದೇವೆ. ಈಗಲೂ ನಮ್ಮದೇ ಆದ ಪ್ರಯತ್ನ ಮಾಡುತ್ತಿದ್ದೇವೆ. 200 ಕ್ಕೂ ಅಧಿಕ ಖಾಯಂ ನೌಕರರು ಹಾಗೂ ಗುತ್ತಿಗೆ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹಿತ ರಕ್ಷಣೆಗೆ ನಾನು ಬದ್ದ ಎಂದರು. ದೇಶದಲ್ಲಿ ಸುಮಾರು 70 ಕೈಗಾರಿಕೆಗಳು ನಷ್ಟದಿಂದಾಗಿ ಮುಚ್ಚುತ್ತಿವೆ. ಇದರಲ್ಲಿ ನಮ್ಮದು ಒಂದು ಎಂದು ಹೇಳಿದರು.
ಜಿಲ್ಲೆಗೆ ಶಾಹಿ ಗಾರ್ಮೆಂಟ್ ವರದಾನವಾಗಿದೆ : ಶಾಹಿ ಗಾರ್ಮೆಂಟ್ಸ್ ಜಿಲ್ಲೆಯಲ್ಲಿ 25 ಸಾವಿರ ಜನಕ್ಕೆ ಕೆಲಸ ನೀಡಿದೆ. ಇನ್ನೂ ಆಶಾವಾದಿಯಾಗಿ ಇರೋಣ. ಯಾರು ಧೃಡಿಗೆಡುವ ಅವಶ್ಯಕತೆ ಇಲ್ಲ. ನಿಮ್ಮ ಹೋರಾಟ ಶಾಂತಿಯುತವಾಗಿರಲಿ. ಎಂಪಿಎಂ ಕಾರ್ಖಾನೆಯ ವಸತಿ ಗೃಹಗಳನ್ನು SBIಗೆ ಅಡ ಇಡಲಾಗಿತ್ತು. ಈಗ 88 ಕೋಟಿ ರೂ ಸಂದಾಯ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಭದ್ರಾವತಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ: ಸಿದ್ದರಾಮಯ್ಯ ಲೇವಡಿ