ಶಿವಮೊಗ್ಗ: ಪ್ರಾಥಮಿಕ ಶಾಲೆಯ 1ರಿಂದ 5ನೇ ತರಗತಿಗಳನ್ನು ಪುನಾರಂಭಿಸುವ ಬಗ್ಗೆ ಶೀಘ್ರದಲ್ಲಿಯೇ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಪಡೆದು ತೀರ್ಮಾನಿಸಲಾಗುವುದು. ಸಮಿತಿಯ ಮುಂದೆ ಈ ಬಗ್ಗೆ ವಿಷಯ ಮಂಡಿಸಲಾಗುತ್ತದೆ. ಈಗಾಗಲೇ 6 ರಿಂದ 9ನೇ ತರಗತಿಗಳನ್ನು ನಮ್ಮ ಶಿಕ್ಷಕರ ನಡೆಸುತ್ತಿರುವುದು ಸಂತಸ ತಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ:
ಈಗಾಗಲೇ ತರಗತಿಗಳಲ್ಲಿ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ಮಾಡಲಾಗುತ್ತಿದೆ. ಪಠ್ಯಕ್ರಮ ಪೂರ್ಣ ಮಾಡುವುದರಿಂದ ಮಕ್ಕಳಿಗೆ ಲಾಭವಾಗುತ್ತದೆ. ಈಗಾಗಲೇ ಮಕ್ಕಳು ಸಾಕಷ್ಟು ತರಗತಿಗಳನ್ನು ಕಳೆದುಕೊಂಡಿದ್ದಾರೆ. ಬ್ರಿಡ್ಜ್ ಕೋರ್ಸ್ ಹಾಗೂ ಮತ್ತೆ ಪಾಠ ಮಾಡಿದ್ದರೆ ಮುಂದೆ ಸಮಸ್ಯೆ ಆಗುತ್ತದೆ. ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ರಜೆ ಕಡಿಮೆ ಮಾಡಿ ಇನ್ನಷ್ಟು ತರಗತಿ ನಡೆಸಬಹುದಾ ಎಂಬ ಯೋಚನೆ ನಡೆಯುತ್ತಿದೆ. ಇದು ಯೋಚನೆ ಅಷ್ಟೇ, ಯಾವುದೇ ತೀರ್ಮಾನ, ಚರ್ಚೆ ನಡೆದಿಲ್ಲ. ಶಿಕ್ಷಕರ ಸಹಕಾರ ತೆಗೆದುಕೊಂಡು ಮಾಡುವ ಯೋಚನೆ ಇದೆ. ಅವಶ್ಯಕತೆ ಬಿದ್ದರೆ ಪಠ್ಯಕ್ರಮ ಕಡಿಮೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಅವಶ್ಯಕವಿದ್ದರೆ, ಶಿಕ್ಷಕರ ವರ್ಗಾವಣೆ ತೆರವಿಗೆ ಚಿಂತನೆ:
ಶಿಕ್ಷಕರ ವರ್ಗಾವಣೆಗೆ ಕೋರ್ಟ್ನಿಂದ ತಡೆಯಾಜ್ಞೆ ಇದೆ. ಇದನ್ನು ಶಿಕ್ಷಕರು ಯಾಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ, ಅನೇಕರಿಗೆ ಸಮಸ್ಯೆಯಾಗಿದೆ. ಅವಶ್ಯವಿದ್ದರೆ ಕೋರ್ಟ್ ಮೂಲಕವೇ ತಡೆಯಾಜ್ಞೆ ತೆರವು ಮಾಡಲಾಗುವುದು ಎಂದರು. ಅಲ್ಲದೆ ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. ಆದರೆ, ನಮ್ಮ ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಡಿಮೆ ಆಗುತ್ತಿದೆ. ಕೊರೊನಾ ಹೆಚ್ಚಾದರೆ, ಶಾಲೆ ಬಂದ್ ಮಾಡುವ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಸಚಿವ ನಾಗೇಶ್ ಶಿವಮೊಗ್ಗ, ಚಿಕ್ಕಮಗಳೂರು ಬಿಜೆಪಿ ಉಸ್ತುವಾರಿ ಗಿರೀಶ್ ಪಟೇಲ್ ಮನೆಗೆ ಭೇಟಿ ನೀಡಿದರು. ಬಳಿಕ ಸಚಿವ ಈಶ್ವರಪ್ಪನವರ ಮನೆ ಭೇಟಿಗೆ ತೆರೆಳಿದ್ದರು. ಈ ವೇಳೆ ಸಚಿವರು ಅನಾರೋಗ್ಯದಿಂದ ಇರುವುದರಿಂದ ಭೇಟಿ ಮಾಡದೆ ವಾಪಸ್ ಆದರು.
ಇದನ್ನೂ ಓದಿ: ಪಣಂಬೂರು ಬೀಚ್ ಬಳಿ ಬೋಟ್ ಅವಘಡ.. ಓರ್ವ ಮೀನುಗಾರ ಸಮುದ್ರಪಾಲು, ನಾಲ್ವರ ರಕ್ಷಣೆ