ಶಿವಮೊಗ್ಗ: ತೀರ್ಥಹಳ್ಳಿಯ ಶಂಕಿತ ಉಗ್ರ ಶಾರಿಕ್ ಹಾಗೂ ಮಾಜ್ ಮುನೀರ್ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ತೀರ್ಥಹಳ್ಳಿಯ ಮೀನು ಮಾರುಕಟ್ಟೆ ಬಳಿಯ ಸಿನಿಮಾ ಟಾಕೀಸ್ ರಸ್ತೆ ಸಮೀಪವಿರುವ ಆರೋಪಿಗಳ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.
ಶಾರಿಕ್ ಕುಟುಂಬಸ್ಥರಿಗೆ ಸೇರಿದ ಕಟ್ಟಡದಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ತೆರೆಯಲಾಗಿದೆ. ಈ ಕಚೇರಿಯು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಸಂಬಂಧಿಗಳ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಲಾಗಿದೆ. ಇದರಿಂದ ಕಾಂಗ್ರೆಸ್ ಕಚೇರಿಯ ಮೇಲೆ ಸಹ ದಾಳಿ ನಡೆಸಲಾಗಿದೆ. ಅಲ್ಲದೇ, ಶಾರಿಕ್ ಸಂಬಂಧಿಕರ ಮನೆ ಮೇಲೂ ಸಹ ದಾಳಿ ಮಾಡಲಾಗಿದೆ.
ಸುಮಾರು 15 ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳು ಭದ್ರತೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳನ್ನು, ಶಸ್ತ್ರಾಸ್ತ್ರಗಳನ್ನು ಕರೆ ತಂದಿದ್ದಾರೆ. ಇಂದು ಸಂಜೆ ತನಕ ಇಲ್ಲಿಯೇ ಕಾರ್ಯಚರಣೆ ನಡೆಯಲಿದೆ ಎನ್ನಲಾಗಿದೆ. ಶಂಕಿತ ಉಗ್ರರಿಗೆ ಹಣ ಎಲ್ಲಿಂದ ಬಂದಿದೆ?. ಉಗ್ರರ ಚಟುವಟಿಕೆಗಳಿಗೆ ಹಣ ಹೇಗೆ ಪೂರೈಕೆ ಆಗಿದೆ? ಎಂಬುದನ್ನು ತಿಳಿಯಲು ಈ ದಾಳಿ ನಡೆಸಲಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜ್ ಮುನೀರ್, ಶಾರೀಕ್ ಮನೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಕುಕ್ಕರ್ ಬಾಂಬರ್ ಶಾರೀಕ್ ಟ್ರಾವೆಲ್ ಹಿಸ್ಟರಿ ಕಲೆಹಾಕುತ್ತಿರುವ ಪೊಲೀಸರು
ಶಾರೀಕ್ ಯಾರು?: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವ ಮೊಹಮ್ಮದ್ ಶಾರಿಕ್ , ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. 2019ರ ಸೆಪ್ಟೆಂಬರ್ನಲ್ಲಿ ಕದ್ರಿ ಪೊಲೀಸ್ ಠಾಣೆ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಉಗ್ರರ ಪರ ಗೋಡೆಬರಹ ಬರೆದ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿದ್ದು, ಇದರಲ್ಲಿ ಮಾಜ್ ಮುನೀರ್, ಸಾದಾತ್, ಶಾರೀಕ್ ಭಾಗಿಯಾಗಿದ್ದಾರೆ. ಇವರೆಲ್ಲರೂ ಶಿವಮೊಗ್ಗ ತೀರ್ಥಹಳ್ಳಿಯ ಸೊಪ್ಪಿನ ಗುಡ್ಡೆ ನಿವಾಸಿಗಳಾಗಿದ್ದಾರೆ.
ಇದನ್ನೂ ಓದಿ: ಶಾರೀಕ್ ಕುಕ್ಕರ್ ಬ್ಲಾಸ್ಟ್ ಎಫೆಕ್ಟ್: ಬಾಡಿಗೆದಾರರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತ
ಕುಕ್ಕರ್ ಬಾಂಬ್ ಸ್ಫೋಟ: ನವೆಂಬರ್ 19 ರಂದು ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಶಂಕಿತ ಉಗ್ರ ಶಾರಿಕ್ ಕೈಯಲ್ಲಿದ್ದ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಈ ವೇಳೆ ಗಾಯಗೊಂಡಿದ್ದ ಆರೋಪಿ ಶಾರೀಕ್ ಮತ್ತು ಆಟೋರಿಕ್ಷಾ ಚಾಲಕ ಪುರುಷೋತ್ತಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ: ನನ್ನ ಮಗ ಮತೀನ್ ಸಂಪರ್ಕಕ್ಕೆ ಸಿಗದೇ ಹಲವು ವರ್ಷಗಳೇ ಕಳೆದಿವೆ: ಮಂಜೂರ್ ಅಹಮದ್