ಶಿವಮೊಗ್ಗ : ಸುಳ್ಳು ದಾಖಲೆಗಳನ್ನು ನೀಡಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ. ಸೀತಾರಾಮ್ ಉಪ ಕುಲಸಚಿವರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎ ಷಣ್ಮುಖ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣ ಸಿ.ಎಂ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಉಪಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಎಂ. ಸೀತಾರಾಮ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎ ಷಣ್ಮುಖ ಅವರು ಸುಳ್ಳು ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ವಂಚಿಸಿದ್ದಾರೆ. ಪರಿಶಿಷ್ಟ ಪಂಗಡ ಜಾತಿಗೆ ಮೀಸಲಿರಿಸಿದ್ದ ಹುದ್ದೆಗಳನ್ನು ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಸೀತಾರಾಮ್ ಅವರು ಮೂಲತಃ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಹಾಗೂ ಡಾ. ಷಣ್ಮುಖ ಅವರು ಒಬಿಸಿ ಪಟ್ಟಿಗೆ ಸೇರಿದವರಾಗಿದ್ದಾರೆ. ಆದರೆ, ಸುಳ್ಳು ದಾಖಲೆ ನೀಡಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಮೇಲೆ ರಾಜ್ಯಪಾಲರು ಮತ್ತು ಸರ್ಕಾರ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ವಜಾಗೋಳಿಸಬೇಕು. ಹಾಗೆಯೇ ಇವರ ಮೇಲೆ ಆರೋಪ ಇದ್ದರು ಕ್ರಮ ಕೈಗೊಳ್ಳದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವರನ್ನು ಕೂಡಲೇ ಜಾರಿಗೆ ಬರುವಂತೆ ರಾಜೀನಾಮೆ ಪಡೆದು ಸಂವಿಧಾನದ ಆಶಯವನ್ನು ಉಳಿಸಬೇಕು ಎಂದು ಅವರು ಒತ್ತಾಯಿಸಿದರು.