ಶಿವಮೊಗ್ಗ: ಪ್ರಿಯತಮೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದವನನ್ನು ಹಾಗೂ ಆತನ ತಾಯಿಯನ್ನು ಕೊಂದ ಆರೋಪಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಎಸ್ಪಿ ಶಾಂತರಾಜು ತಿಳಿಸಿದ್ದಾರೆ.
ಬೆಂಗಳೂರು ಪೀಣ್ಯದ ನಿವಾಸಿ ಭರತ್ ಗೌಡ ಪೊಲೀಸರ ಬಲೆಗೆ ಬಿದ್ದ ಕೊಲೆ ಆರೋಪಿ. ಭರತ್ಗೌಡ ಪ್ರೀತಿಸುತ್ತಿದ್ದ ಶೃತಿ ಎಂಬ ಯುವತಿಯ ಖಾಸಗಿ ವಿಡಿಯೋ ಕೊಲೆಯಾದ ಪ್ರವೀಣ್ ಎಂಬಾತನ ಬಳಿ ಇತ್ತು. ಇದನ್ನು ಇಟ್ಟುಕೊಂಡು ತನ್ನ ಪ್ರಿಯತಮೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರವೀಣ್ ಹಾಗೂ ಆತನ ತಾಯಿಯನ್ನು ಕೊಲೆ ಮಾಡಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಅಕ್ಟೋಬರ್ 10ರಂದು ಬೆಂಗಳೂರಿನಿಂದ ಬಂದ ಭರತ್, ಸಾಗರದ ಕುನ್ನಿಕೊಡ್ಲು ಪ್ರವೀಣ್ ಮನೆಗೆ ಹೋಗಿ ಕೊಲೆ ಮಾಡಿದ್ದಾನೆ. ಪ್ರವೀಣ್ನನ್ನು ಕೊಲೆ ಮಾಡುವಾಗ ಅಡ್ಡಬಂದ ಪ್ರವೀಣನ ತಾಯಿ ಬಂಗಾರಮ್ಮನನ್ನು ಹತ್ಯೆ ಮಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿರುತ್ತಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಯಾವುದೇ ತಾಂತ್ರಿಕ ಮಾಹಿತಿ ಲಭ್ಯವಾಗಿಲ್ಲ. ನಂತರ ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿ ಭರತ್ ಗೌಡನನ್ನು ಬಂಧಿಸಲಾಗಿದೆ.
ಕೊಲೆ ನಡೆದ 10 ದಿನದಲ್ಲಿ ಪ್ರಕರಣ ಬೇಧಿಸಿದ ಸಾಗರ ಪೊಲೀಸರು ಭರತ್ ಗೌಡನನ್ನು ಸ್ಥಳ ಮಹಜರು ನಡೆಸಿ ವಾಪಸ್ ಕರೆದುಕೊಂಡು ಹೋಗುವಾಗ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಸಾಗರ ಪ್ರಭಾರ ಸಿಪಿಐ ಕುಮಾರಸ್ವಾಮಿ ಭರತ್ ಗೌಡನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಭರತ್ ಗೌಡ ಹಾಗೂ ಕುನ್ನಿಕೊಡ್ಲು ಗ್ರಾಮದ ಶೃತಿ ಪರಸ್ಪರ ಪ್ರೀತಿಸುತ್ತಿದ್ದರು. ಶೃತಿ ಇದಕ್ಕೂ ಮೊದಲು ಕೊಲೆಯಾದ ಪ್ರವೀಣ್ ಜೊತೆ ಸಲುಗೆಯಿಂದ ಇದ್ದು, ಇಬ್ಬರ ಖಾಸಗಿ ವಿಡಿಯೋ ಪ್ರವೀಣನ ಬಳಿ ಇತ್ತು. ಇದನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಗ್ರಾಮಕ್ಕೆ ಬಂದಾಗಲೆಲ್ಲ, ನನ್ನ ಬಳಿ ಬರಬೇಕು ಎಂದು ಪೀಡಿಸುತ್ತಾನೆ ಎಂದು ಭರತ್ ಗೌಡನ ಬಳಿ ಹೇಳಿಕೊಂಡಿದ್ದಳಂತೆ ಶೃತಿ.
ಭರತ್ ಗೌಡ ಹಾಗೂ ಶೃತಿ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪ್ರೀತಿಸಿದ್ದರು. ಮದುವೆಯಾಗಲು ಸಹ ನಿರ್ಧಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭರತ್ ಗೌಡ ಅಕ್ಟೋಬರ್ 10ರಂದು ಬೆಂಗಳೂರಿನಿಂದ ಬಂದಿದ್ದಾನೆ. ಈ ವೇಳೆ, ಶೃತಿ ಪ್ರವೀಣನ ಮನೆ ತೋರಿಸಿದ್ದಾಳೆ. ಮನೆಗೆ ನುಗ್ಗಿದ ಭರತ್ ವಿಡಿಯೋ ಕೇಳಿದ್ದಾನೆ. ಬಳಿಕ ಇಬ್ಬರ ನಡುವೆ ಜಗಳ ಉಂಟಾಗಿ, ಭರತ್ ಆತನನ್ನು ಕೊಲೆ ಮಾಡಿದ್ದಾನೆ.
ಈ ವೇಳೆ, ಪ್ರವೀಣನ ಮಡದಿ ರೋಹಿಣಿ ಹಾಗೂ ಇವರ 10 ತಿಂಗಳ ಮಗು ಸಹ ಇತ್ತು. ಭರತ್ ಗೌಡ ಇಬ್ಬರನ್ನು ಕೊಲೆ ಮಾಡಿದ ನಂತರ ರೋಹಿಣಿ ರೇಪ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ತನಿಖೆ ನಡೆಸಿ, ಮಹಜರು ನಡೆಸುವಾಗ ಪರಾರಿಯಾಗಲು ಯತ್ನಿಸಿ ಗುಂಡೇಟು ತಿಂದಿದ್ದಾನೆ.
ಆರೋಪಿ ಭರತ್ ಗೌಡ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ಭರತ್ A-1 ಆರೋಪಿ, ಶೃತಿ A-2 ಆರೋಪಿಯಾಗಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಕುಮಾರಸ್ವಾಮಿ, ಅಭಯ್ ಸೋಮನಾಳ್ ಹಾಗೂ ಅವರ ತಂಡಕ್ಕೆ ಎಸ್‌ಪಿ ಅಭಿನಂದನೆ ಸಲ್ಲಿಸಿದ್ದಾರೆ.