ಶಿವಮೊಗ್ಗ : ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್‌ನಲ್ಲಿ ಯಾವುದೇ ಕಾರಣಕ್ಕೂ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸಲು ಬಿಡುವುದಿಲ್ಲ ಎಂದು ಸಹ್ಯಾದ್ರಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುಮೂರ್ತಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ 1940ರಲ್ಲಿಯೇ 100 ಎಕರೆ ಜಾಗವನ್ನು ದೂರದೃಷ್ಟಿಯಿಂದ ನೀಡಿದ್ದರು. ಅದು ಈಗ ಒತ್ತುವರಿಯಾಗಿ ಕೇವಲ 76 ಎಕರೆ ಮಾತ್ರ ಉಳಿದಿದೆ. ಈ ಜಾಗದಲ್ಲಿಯೂ ಈಗಾಗಲೇ 3 ಪ್ರತ್ಯೇಕ ಕಾಲೇಜುಗಳು ತಲೆ ಎತ್ತಿವೆ.
ಸುಮಾರು ಆರುವರೆ ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ನಾತಕೋತ್ತರ ವಿಭಾಗವನ್ನು ಸಹ ತೆರೆಯಲಾಗಿದೆ. ಈಗಿರುವ ಜಾಗವು ಇಲ್ಲಿನ ವಿದ್ಯಾರ್ಥಿಗಳಿಗೆ ಸಾಕಾಗುವುದಿಲ್ಲ. ಹಾಗಾಗಿ, ಖೇಲೋ ಇಂಡಿಯಾ ಅಥವಾ ಸಾಯಿ ಸಂಸ್ಥೆಗೆ ಕಾಲೇಜಿನ ಜಾಗವನ್ನು ಕೊಡಲು ಬಿಡುವುದಿಲ್ಲ ಎಂದರು.
ಈಗಿರುವ ಜಾಗದಲ್ಲೇ ವಿದ್ಯಾರ್ಥಿನಿಯರ ಹಾಸ್ಟೆಲ್, ಲೈಬ್ರರಿ, ಕ್ರೀಡಾಂಗಣ, ಪ್ರಯೋಗಾಲಯ, ಆಡಿಟೋರಿಯಂ ಸೇರಿ ಅನೇಕ ಸೌಲಭ್ಯಗಳು ಬೇಕಾಗುತ್ತವೆ. ಇಂತಹ ಸ್ಥಿತಿ ಸಹ್ಯಾದ್ರಿ ಕಾಲೇಜಿಗಿರುವಾಗ ಈಗ ಮತ್ತೆ 18 ಎಕರೆ ಜಾಗವನ್ನು ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಬಿಟ್ಟು ಕೊಡಲು ಸಾಧ್ಯವಿಲ್ಲ.
ನಾವು ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಮಾತ್ರ ಬೇಡವೇ ಬೇಡ ಎಂಬುದಷ್ಟೇ ನಮ್ಮ ವಾದ. ಇದನ್ನು ಮೀರಿ ಜಿಲ್ಲಾಡಳಿತ ಅಥವಾ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಯೇ ಸ್ಥಾಪಿಸಲು ಮುಂದಾದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.