ಶಿವಮೊಗ್ಗ : ಈಶ್ವರಪ್ಪನವರನ್ನು ನಂಬಿ ಹೋದರೆ ಚೆಂಬು, ಮೂರು ನಾಮವೇ ಗತಿ, ಅದಕ್ಕೆ ನಾನೇ ಉದಾಹರಣೆ ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಮತ್ತು ಅವರ ನಡುವಿನ ವೈಮನಸ್ಸಿಗೆ ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರನ್ನು ಯಾವ ಕುರುಬರು ಏಕೆ ನಂಬೋದಿಲ್ಲಾ ಎಂದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದವರಿಗೆಲ್ಲ ನಾಮ ಇಟ್ಟು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಈಶ್ವರಪ್ಪನವರು ಹಿಂದುಳಿದ ವರ್ಗದ ನಾಯಕರೆಂದು ಹೇಳಿಕೊಳ್ಳಲು ನಾಚಿಕೆ ಆಗಬೇಕು. ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಪಕ್ಷದ ಓರ್ವ ನಾಯಕರಾಗಿ ಸಿಗಂದೂರು ದೇವಸ್ಥಾನದ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ಅದನ್ನು ಮಾಡಲಿಲ್ಲ ಎಂದು ಅವರ ವೈಫಲ್ಯತೆಗೆ ಕಿಡಿ ಕಾರಿದರು.
ಕನಕ ಪೀಠಕ್ಕೆ ಹಾಗೂ ಕುರುಬ ಸಮಾಜಕ್ಕೆ ಈಶ್ವರಪ್ಪನವರ ಕೊಡುಗೆ ಏನೂ ಇಲ್ಲ. ಆರ್ಎಸ್ಎಸ್ನಿಂದ ತಮಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಕನಕದಾಸರ ಪೀಠದ ಹೋರಾಟಕ್ಕೆ ಇವರು ಯಾವತ್ತೂ ಹೋಗಲಿಲ್ಲ ಎಂದು ಆರೋಪ ಮಾಡಿದರು.
ಯಡಿಯೂರಪ್ಪನವರು ಕೊನೆಯಲ್ಲಿ ಏನಾದರೂ ತಮ್ಮ ಸಿಎಂ ಕುರ್ಚಿಯಿಂದ ಕೆಳಗಿಳಿಯಬಹುದು. ಇದೇ ಕುರ್ಚಿ ತನಗೆ ಸಿಗಬಹುದೆಂದು ಈಶ್ವರಪ್ಪನವರು ಕಾಯುತ್ತಿರಬೇಕು ಎಂದು ಕುಟುಕಿದರು.