ಶಿವಮೊಗ್ಗ: ನನ್ನ ಮಗಳು, ಕಾಲೇಜು ಪ್ರಿನ್ಸಿಪಾಲ್ ಗೆ ಮಗಳ ಕಾಲೇಜಿನ ಫೀಸು ಸೇರಿದಂತೆ ಇತರೆ ವಿಚಾರಗಳ ಕುರಿತು ಸಿಬಿಐ ನೋಟಿಸ್ ನೀಡುತ್ತಿದೆ. ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಪತ್ರ ಬರೆಯಬೇಕೆಂದುಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಇಡಿ ನೋಟಿಸ್ ನೀಡಿದೆ, ನಾನು ಫೆ. 22 ರಂದು ಇಡಿ ಮುಂದೆ ಹಾಜರಾಗಬೇಕೆಂದುಕೊಂಡಿದ್ದೇನೆ ಎಂದರು.
ಇದೇ ವೇಳೆ ಇಡಿ ನಮಗೆ ಕಿರುಕುಳ ನೀಡುತ್ತಿದೆ. ಯಂಗ್ ಇಂಡಿಯಾಕ್ಕೆ ನೀಡಿದ ಹಣದ ಕುರಿತು ಮಾಹಿತಿ ಕೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರ ಸರ್ಕಾರದ ಬಳಿ ಹೋಗಿ ಸಿಡಿ ಕುರಿತು ದೂರು ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಅವರು ಹಾಗೂ ಮಾಜಿ ಸಚಿವ ಈಶ್ಬರಪ್ಪ ಇಬ್ಬರಿಗೂ ಸಹ ಸಚಿವ ಸ್ಥಾನ ಸಿಗಲಿಲ್ಲ. ಅದರಲ್ಲೂ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರ ತಲೆಕೆಟ್ಟಿದೆ. ಅವರು ಡಿಸ್ಟರ್ಬ್ ಆಗಿದ್ದಾರೆ. ಇದರಿಂದ ನೀವೆಲ್ಲಾ ಸುಧಾಕರ್ ಅವರಿಗೆ ಶಿಫಾರಸ್ಸು ಮಾಡಿ ಒಳ್ಳೆಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕೆಂದು ಡಿಕೆಶಿ ಟೀಕಿಸಿದರು.
ಅದಾನಿ ಗ್ರೂಪ್ ಮೇಲೆ ಐಟಿ ದಾಳಿಯ ಕುರಿತು ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು. ಐಟಿ ದಾಳಿಯಲ್ಲಿ ಯಾರ್ಯಾರು ಇದ್ದಾರೆ, ಎಲ್ಲವೂ ನಮಗೆ ಗೂತ್ತು ಎಂದರು. ಮುಂದಿನ ಒಂದು ವಾರದಲ್ಲಿ ಶಿವಮೊಗ್ಗದ ಟಿಕೆಟ್ ಫೈನಲ್ ಆಗುತ್ತದೆ ಎಂದು ಇದೇ ಸಂದರ್ಭದಲ್ಲಿ ಡಿಕೆಶಿ ಹೇಳಿದರು.
ಮದ್ಯ ಸೇವನೆ ವಯಸ್ಸು 18ಕ್ಕೆ ಇಳಿಕೆಗೆ ವಿರೋಧ.. ಮದ್ಯ ಸೇವನೆಯ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸುವ ಸರ್ಕಾರದ ನಿರ್ಧಾರಕ್ಕೆ ಡಿ ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸರ್ಕಾರದ ಮನಸ್ಥಿತಿ ಏನೂ ಅನ್ನೋದು ತಿಳಿಯುತ್ತದೆ ಎಂದು ಹರಿಹಾಯ್ದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅರಣ್ಯ ಸಕ್ರಮದ 75 ವರ್ಷದಿಂದ 25 ಕ್ಕೆ ಇಳಿಸುತ್ತೇವೆ. ಎಸ್ಸಿ/ಎಸ್ಟಿ ಗಳಿಗೆ 25 ವರ್ಷ ಇದೆ. ಇತರೆ ವರ್ಗಗಳಿಗೆ 75 ವರ್ಷ ಇದೆ. ಇದರಿಂದ ನಾವು ಅಧಿಕಾರಕ್ಕೆ ಬಂದ್ರೆ, ಅರಣ್ಯ ಸಕ್ರಮಿಕರಣವನ್ನು 25 ವರ್ಷಕ್ಕೆ ಇಳಿಸುತ್ತೇವೆ. ಅರಣ್ಯೀಕರಣದ ಹೆಸರಿನಲ್ಲಿ ಯಾರನ್ನು ಒಕ್ಕಲೆಬ್ಬಿಸಲು ಬಿಡಲ್ಲ ಎಂದರು.
ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ಶಿಫಾರಸ್ಸಿಗೆ ತಕರಾರಿಲ್ಲ.. ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು ನಾಮಕರಣ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನು ನಾಮಕಾರಣ ಮಾಡಲು ನಮ್ಮ ತಕರಾರು ಇಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿ ಸಂತ್ರಸ್ತರಾದವರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ವಿಐಎಸ್ಎಲ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, ಕಾರ್ಖಾನೆ ನಡೆಯಲು ಮೈನಿಂಗ್ ಬೇಕು. ಮೈನಿಂಗ್ ಇದ್ರು ಅದಕ್ಕೆ ಪರವಾನಿಗೆ ನೀಡಿಲ್ಲ. ಮೈನಿಂಗ್ ನೀಡಿದ್ರೆ ಕಾರ್ಖಾನೆ ಪರವಾಗಿ ಇರುತ್ತಿತ್ತು. ಆದರೆ ಕಳೆದ 7 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದು, ಕಾರ್ಖಾನೆಗೆ ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶರಾವತಿ ಸಂತ್ರಸ್ತರ ಸಮಸ್ಯೆ ಕುರಿತು ಮಾತನಾಡಿದ ಅವರು, ಸರ್ಕಾರ ಮೊದಲು ಕೋರ್ಟ್ ನಲ್ಲಿ ಇರುವ ವಿಚಾರವನ್ನು ಪರಿಹರಿಸಲಿ ಎಂದರು. ನಂತರ ಡಿ.ಕೆ.ಶಿವಕುಮಾರ್ ಅವರು ನಗರದ ಶಿವಪ್ಪ ನಾಯಕ ಪ್ರತಿಮೆಗೆ ಬೃಹತ್ ಹಾರ ಹಾಕಿ ಅಲ್ಲಿಂದ ತೆರಳಿದರು. ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮುಖಂಡರಾದ ಎಸ್.ಕೆ. ಮರಿಯಪ್ಪ. ರವಿ ಕುಮಾರ್ ಹಾಜರಿದ್ದರು.
ಇದನ್ನೂ ಓದಿ... ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ: ದಾವಣಗೆರೆಯತ್ತ ಸಿದ್ದರಾಮಯ್ಯ, ಚಿತ್ರದುರ್ಗದತ್ತ ಡಿಕೆಶಿ ಪ್ರಯಾಣ