ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಕೋವಿಡ್ ಬೆಡ್ಗಳು ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಿದೆ. ಹಾಗಾಗಿ ಜಿಲ್ಲೆಯ ಜನ ಗಾಬರಿಯಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರ‍್ಯಾಪಿಡ್ ಆಂಟಿಜೆನ್ ಕಿಟ್ ಪರೀಕ್ಷೆ ನಡೆಸುವುದರಿಂದ ಹೆಚ್ಚಿನ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ರೋಗ ಲಕ್ಷಣವಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ 233 ಮಂದಿ ಇದ್ದಾರೆ.
ಜಿಲ್ಲೆಯ ವಿವಿಧ ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇದರಲ್ಲಿ 436 ಮಂದಿ ಇದ್ದಾರೆ. ಈಗ 550 ಬೆಡ್ಗಳು ಉಪಯೋಗಕ್ಕೆ ಸಿದ್ಧವಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ 37 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 300 ಬೆಡ್ಗಳ ಸೌಲಭ್ಯ ಸಿದ್ಧವಿದೆ ಎಂದರು.
ಪ್ರಸ್ತುತ 28 ವೆಂಟಿಲೇಟರ್ಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಲಭ್ಯವಿದೆ. ಇನ್ನೂ 37 ವೆಂಟಿಲೇಟರ್ ಒಂದು ವಾರದ ಒಳಗೆ ಸಿದ್ಧವಾಗುತ್ತವೆ. ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದಂತೆ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು ಎಂದರು.
ಹೋಮ್ ಕ್ವಾರಂಟೈನ್: ರೋಗ ಲಕ್ಷಣವಿಲ್ಲದ ಪಾಸಿಟಿವ್ ವ್ಯಕ್ತಿಗಳಿಗೆ ಮನೆಯಲ್ಲಿ ಐಸೋಲೇಷನ್ ವ್ಯವಸ್ಥೆ ಇದ್ದರೆ ಅನುಮತಿ ನೀಡಲಾಗುತ್ತಿದೆ. ಅಂತಹ ವ್ಯಕ್ತಿಗಳನ್ನು ಆರಂಭದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಎದೆ ಎಕ್ಸರೇ, ರಕ್ತ ಪರೀಕ್ಷೆ ಇತ್ಯಾದಿ ಕಡ್ಡಾಯವಾಗಿ ತಪಾಸಣೆ ನಡೆಸಲಾಗುವುದು ಎಂದರು. ನಂತರ ವೈದ್ಯರ ತಂಡ ಮನೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಆ್ಯಂಬುಲೆನ್ಸ್ ಮೂಲಕ ಮನೆಗೆ 24 ಗಂಟೆಯೊಳಗೆ ಕರೆ ತಂದು ಹೋಮ್ ಕ್ವಾರಂಟೈನ್ ಮಾಡಲಾಗುವುದು. ಹೋಮ್ ಕ್ವಾರಂಟೈನ್ ತಪಾಸಣೆ ನಡೆಸಲು ಪ್ರಸ್ತುತ 5 ತಂಡಗಳನ್ನು ರಚಿಸಲಾಗಿದೆ ಎಂದರು.
ಕೋವಿಡ್ ತಡೆಯುವಲ್ಲಿ ಜನರ ಸಹಕಾರ ಅಗತ್ಯ : ಜನರ ಸಹಕಾರವಿಲ್ಲದೆ ಕೋವಿಡ್ ತಡೆಯಲು ಸಾಧ್ಯವಾಗುವುದಿಲ್ಲ. ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಬೇಕು ಎಂದು ವಿನಂತಿಸಿಕೊಂಡರು.
ಸಹಾಯವಾಣಿ : ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗಾಗಿ ದಾಖಲಾದವರು ತಮ್ಮ ಅಹವಾಲುಗಳನ್ನು ಸಹಾಯವಾಣಿ ಸಂಖ್ಯೆಯಾದ 08182-221010/22008ಗೆ ಕರೆ ಮಾಡಬಹುದಾಗಿದೆ.