ಶಿವಮೊಗ್ಗ : ರೈತನೇ ಶ್ರೀಮಂತ ಎಂದು ಪ್ರತಿಬಿಂಬಿಸುವ ರೈತರ ಬವಣೆ, ಬದುಕನ್ನೇ ಪ್ರಧಾನವಾಗಿಟ್ಟುಕೊಂಡಿರುವ ‘ಶ್ರೀಮಂತ’ ಚಿತ್ರವು ಏ.14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹಾಸನ್ ರಮೇಶ್ ಹೇಳಿದರು.
ದೇಶಕ್ಕೆ ಅನ್ನ ಕೊಡುವ ರೈತನೇ ಶ್ರೀಮಂತ: ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀಮಂತ ಎಂಬ ಪದಕ್ಕೆ ಬೇರೆ ಬೇರೆ ರೀತಿಯ ಅರ್ಥಗಳಿವೆ. ಕೇವಲ ಹಣವಿದ್ದವನು ಮಾತ್ರ ಶ್ರೀಮಂತ ಆಗಲಾರ. ಆತ ಹಣದಲ್ಲಿ ಶ್ರೀಮಂತನೇ. ಗುಣದಲ್ಲಿ ಶ್ರೀಮಂತನೇ. ಹೃದಯವಂತಿಕೆಯಲ್ಲಿ ಶ್ರೀಮಂತನೇ. ಜ್ಞಾನದಲ್ಲಿ ಶ್ರೀಮಂತನೇ ಎಂದು ಪ್ರಶ್ನಿಸುತ್ತಾ ಹೋದರೆ ಕೊನೆಯಲ್ಲಿ ನಮಗೆ ಉತ್ತರ ಸಿಕ್ಕಿದ್ದು ಈ ಎಲ್ಲಾ ಗುಣಗಳನ್ನು ಹೊಂದಿರುವ ದೇಶಕ್ಕೆ ಅನ್ನ ಕೊಡುವ ರೈತನೇ ಶ್ರೀಮಂತ ಎಂದು. ಹಾಗಾಗಿ ರೈತನ ಸುತ್ತ ನಡೆಯುವ ಘಟನೆಗಳನ್ನು, ಬದುಕನ್ನು ನೋಡುತ್ತಾ ಒಂದು ಉತ್ತಮ ಸಂದೇಶವನ್ನು ಸಾರುವ ಚಿತ್ರವೇ ಇದಾಗಿದೆ ಎಂದರು.
ರೈತನೇ ಜಗತ್ತಿನ ಅತಿದೊಡ್ಡ ಶ್ರೀಮಂತ: ಇದರ ಜೊತೆಗೆ ಸಾಂಸ್ಕೃತಿಕ ಚೌಕಟ್ಟನ್ನು ಈ ಸಿನಿಮಾ ಹೊಂದಿದೆ. ಹಳ್ಳಿಗಳು, ಸುಗ್ಗಿ, ಜಾತ್ರೆ, ಹಬ್ಬ, ಹಾಡು, ಹಸೆ, ಹಳ್ಳಿ ಆಟಗಳು, ಗ್ರಾಮೀಣ ಕಲೆಗಳನ್ನು ನೆನಪು ಮಾಡಿಕೊಳ್ಳುತ್ತಾ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಭ್ರಮಗಳನ್ನು ತಿಳಿಹಾಸ್ಯದ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುವುದೇ ಚಿತ್ರದ ಆಶಯವಾಗಿದೆ. ಹಾಗಾಗಿ ರೈತನೇ ಜಗತ್ತಿನ ಅತಿದೊಡ್ಡ ಶ್ರೀಮಂತ ಎಂದು ನಮ್ಮ ಸಿನಿಮಾ ಸಾಕ್ಷೀಕರಿಸುತ್ತದೆ ಎಂದು ಹೇಳಿದರು.
ನೈಜ ರೈತರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ: ಭಾರತದ ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಅಭಿನಯಿಸಿದ್ದು, ಯುವಪ್ರತಿಭೆ ಕ್ರಾಂತಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಹಿರಿಯ ಕಲಾವಿದರುಗಳಾಗಿ ರಮೇಶ್ ಭಟ್, ರವಿಶಂಕರ್ ಗೌಡ, ಸಾಧುಕೋಕಿಲ, ಚರಣ್ ರಾಜ್, ರಾಜು ತಾಳಿಕೋಟೆ, ಬ್ಯಾಂಕ್ ಮಂಜಣ್ಣ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನೈಜ ರೈತರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಸಾಮುದಾಯಿಕ ಚಿತ್ರವಾಗಿದೆ ಎಂದರು.
ನಾದಬ್ರಹ್ಮ ಡಾ ಹಂಸಲೇಖ ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. 6 ಇಂಪಾದ ಹಾಡುಗಳು ಈ ಚಿತ್ರದಲ್ಲಿ ಇವೆ. ದಿವಂಗತ ಡಾ. ಎಸ್. ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆಯ ಹಾಡು ಕೂಡ ಈ ಚಿತ್ರದ್ದೇ ಆಗಿದೆ. ರವಿಕುಮಾರ್ ಛಾಯಾಗ್ರಹಣ ಹೊಂದಿದ್ದು, ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರು.
ಈಗ ಶ್ರೀಮಂತ ಚಿತ್ರ ಸೇರುತ್ತದೆ : ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಮಾತನಾಡಿ, ರೈತರ ಸಮಸ್ಯೆಗಳನ್ನು, ಬದುಕನ್ನೇ ಪ್ರಧಾನವಾಗಿಟ್ಟುಕೊಂಡು ಬಂದ ಚಿತ್ರಗಳು ಅತ್ಯಂತ ಅಪರೂಪವಾಗಿವೆ. ಡಾ ರಾಜ್ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ನಂತರ ರೈತನನ್ನೇ ಮುಖ್ಯಭೂಮಿಕೆಯಾಗಿಟ್ಟುಕೊಂಡು ಬಂದ ಚಿತ್ರಗಳು ವಿರಳ. ಅಂತಹ ಪಟ್ಟಿಗೆ ಈಗ ಶ್ರೀಮಂತ ಚಿತ್ರ ಸೇರುತ್ತದೆ ಎಂದು ಹೇಳಿದರು.
ರೈತ ನಿಜವಾದ ಅರ್ಥದಲ್ಲಿ ಶ್ರೀಮಂತನಾಗಿದ್ದಾನೆ. ಸ್ವಾಭಿಮಾನ, ತ್ಯಾಗ, ಲಾಭ ಬಯಸದ ದೇಶಕ್ಕೆ ಅನ್ನ ಕೊಡುವ ಕೃಷಿ ಸಂಸ್ಕೃತಿಯನ್ನೇ ಹೊದ್ದುಕೊಂಡಿರುವ ಈ ಚಿತ್ರ ಯಶಸ್ವಿಯಾಗಲಿ. ರೈತರೂ ಸೇರಿದಂತೆ ಎಲ್ಲ ವರ್ಗದ ಜನರು ಈ ಚಿತ್ರವನ್ನು ವೀಕ್ಷಿಸಬೇಕು ಎಂದರು. ಮಾಧ್ಯಮಗೋಷ್ಟಿಯಲ್ಲಿ ನಟ ಕ್ರಾಂತಿ, ನಿರ್ಮಾಪಕ ಸಂಜಯ್‌ಬಾಬು, ಪ್ರಮುಖರಾದ ಹೆಚ್. ಕೆ ವಿವೇಕಾನಂದ, ಸತೀಶ್ ಪಾಟೀಲ್, ಮಹೇಶ್ ಇದ್ದರು.
ಇದನ್ನೂ ಓದಿ : ಏಪ್ರಿಲ್ 7ಕ್ಕೆ ವೀರಂ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ: ನಟ ಪ್ರಜ್ವಲ್ ದೇವರಾಜ್