ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಸಿಗಂದೂರು ಲಾಂಚ್ ಸೇವೆಯು ಕೆಲ ದಿನಗಳ ಕಾಲ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈ ಮೂಲಕ ಮತ್ತೆ 18 ವರ್ಷದ ಹಿಂದಿನ ಪರಿಸ್ಥಿತಿ ಮರುಕಳಿಸುವ ಆತಂಕ ಸೃಷ್ಟಿಯಾಗಿದೆ.
ಪ್ರತಿ ಬಾರಿಯಂತೆ ವರ್ಷದ ಜೂನ್ ತಿಂಗಳ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷೆಗಿಂತ ವಿಳಂಬವಾಗಿದೆ. ಹತ್ತು ದಿನ ತಡವಾಗಿ ಮುಂಗಾರು ಮಳೆ ರಾಜ್ಯವನ್ನು ಪ್ರವೇಶಿಸಿದ್ದು, ರಾಜ್ಯದ ಹಲವೆಡೆ ಮುಂಗಾರು ಮಳೆಯಾಗಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ನಿಗದಿಯಂತೆ ಮುಂಗಾರು ಮಳೆಯಾಗದೆ, ಬಿಸಿಲಿನ ಝಳ ಹೆಚ್ಚಿದ್ದರಿಂದ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗಿದೆ. ಅಲ್ಲದೆ ಹೊಳೆಯ ಆಳದಲ್ಲಿದ್ದ ಮರಗಳು ಮೇಲೆ ಕಾಣಿಸುತ್ತಿವೆ.
ಸಾಗರ ತಾಲೂಕು ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಲಾಂಚ್ಗಳು ಸಂಚರಿಸುತ್ತಿವೆ. ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ನೂರಾರು ಭಕ್ತರು ಈ ಲಾಂಚ್ ಮೂಲಕ ಸಂಚರಿಸುತ್ತಾರೆ. ಆದರೆ ಶರಾವತಿ ನೀರಿನ ಮಟ್ಟ ಇಳಿಕೆ ಆಗಿರುವುದರಿಂದ ಲಾಂಚ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಶರಾವತಿಯಲ್ಲಿ ಇದೇ ಪ್ರಮಾಣದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಾ ಹೋದರೆ ಇನ್ನೂ ಕೆಲವೇ ದಿನಗಳಲ್ಲಿ ಲಾಂಚ್ ಸೇವೆಯೂ ಸ್ಥಗಿತಗೊಳ್ಳುವ ಸಂಭವ ಇದೆ. ಇದೇ ರೀತಿ ಮುಂದುವರೆದರೆ ಮೊದಲು ಲಾಂಚ್ ಮೇಲೆ ವಾಹನಗಳು ಹಾಕುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಲಾಂಚ್‌ನಲ್ಲಿ ಜನರನ್ನು ಮಾತ್ರ ಕರೆದೊಯ್ಯಲಾಗುತ್ತದೆ. ಇನ್ನೂ ನೀರು ಕಡಿಮೆಯಾದರೆ ಲಾಂಚ್ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಲಾಂಚ್ ಚಾಲಕರು ಹೇಳಿದ್ದಾರೆ.
ಪರ್ಯಾಯ ವ್ಯವಸ್ಥೆಗೆ ಸಿದ್ಧತೆ : ಶರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದರೆ ಆಳದಲ್ಲಿದ್ದ ಮರಗಳು ಲಾಂಚ್‌ಗೆ ತಾಗುತ್ತವೆ. ಇದರಿಂದ ಲಾಂಚ್‌ಗೆ ಹಾನಿಯಾಗಬಹುದು. ಅಲ್ಲದೆ ನಡು ನೀರಿನಲ್ಲಿ ಪ್ರಯಾಣಿಕರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ನೀರಿನ ಮಟ್ಟ ಇಳಿಕೆಯಾಗುತ್ತಿದ್ದಂತೆ ಲಾಂಚ್ ಸೇವೆ ಸ್ಥಗಿತಗೊಳಿಸಲಾಗುತ್ತದೆ. ಇನ್ನೊಂದೆಡೆ, ಸ್ಥಳೀಯರ ಓಡಾಟಕ್ಕೆ ಅನುಕೂಲ ಕಲ್ಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಮೋಟರ್ ಬೋಟ್ ಮತ್ತು ಮಿನಿ ಲಾಂಚ್ ಬಳಕೆ ಮಾಡಲು ನಿರ್ಧರಿಸಲಾಗಿದೆ.
ತಾತ್ಕಾಲಿಕ ರ‍್ಯಾಂಪ್ ನಿರ್ಮಾಣ : ಲಾಂಚ್‌ಗೆ ಪ್ರಯಾಣಿಕರು, ವಾಹನಗಳು ಸುಲಭವಾಗಿ ಹತ್ತಲು ಅಂಬಾರಗೋಡ್ಲು ಮತ್ತು ಕಳಸವಳ್ಳಿಯಲ್ಲಿ ಸಿಮೆಂಟ್ ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ನೀರಿನ ಮಟ್ಟ ಇಳಿಕೆಯಾದ್ದರಿಂದ ರ‍್ಯಾಂಪ್‌ಗಳು ಲಾಂಚ್‌ಗೆ ಸಿಗದಂತಾಗಿವೆ. ಹಾಗಾಗಿ ಅಧಿಕಾರಿಗಳು ತಾತ್ಕಾಲಿಕ ರ‍್ಯಾಂಪ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾದರೇ ಸಂಪೂರ್ಣ ಲಾಂಚ್ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ ಪ್ರವಾಸಿಗರು ಈ ಬಗ್ಗೆ ಮಾಹಿತಿ ಪಡೆದು ಸಿಗಂದೂರಿಗೆ ತೆರಳುವುದು ಉತ್ತಮ.
ಇದನ್ನೂ ಓದಿ : Monsoon-Enters Karnataka: ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್