ಬೆಂಗಳೂರು/ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಮಂಗಳವಾರ ಸಭೆ ನಡೆಯಿತು. ಈ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ಸಂತ್ರಸ್ತರಿಗೆ ಅನುಕೂಲವಾಗುವಂತೆ ಸುಮಾರು 9 ಸಾವಿರ ಎಕರೆ ಜಮೀನನ್ನು ನೋಟಿಫಿಕೇಶನ್ ಮಾಡಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಸಲುವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಸಭೆಯ ಬಳಿಕ ಮಾಹಿತಿ ನೀಡಿದ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಜಿಲ್ಲೆಯ ಶರಾವತಿ ಸಂತ್ರಸ್ತರಿಗಾಗಿ ಅಂದು ಸುಮಾರು 6 ಸಾವಿರ ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಹೈಕೋರ್ಟ್ 1980ರ ಅರಣ್ಯ ಕಾಯ್ದೆಯಂತೆ ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೇ ಜಮೀನು ನೋಟಿಫಿಕೇಶನ್ ಮಾಡಿರುವುದು ಸರಿಯಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿತ್ತು.
ಹೈಕೋರ್ಟ್ ರದ್ದುಗೊಳಿಸಿರುವ ಎಲ್ಲ 57 ಅಧಿಸೂಚನೆಗಳನ್ನು ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಊರ್ಜಿತಗೊಳಿಸಬಹುದಾಗಿದೆ. ಈ ಹಿನ್ನೆಲೆ ಕೇಂದ್ರಕ್ಕೆ ನಿಯೋಗ ಕರೆದೊಯ್ದು ಅನುಷ್ಠಾನಗೊಳಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಹಕ್ಕಿ ಪಿಕ್ಕಿ ಕ್ಯಾಂಪ್ ಒತ್ತುವರಿ ತೆರವು.. ಜೆಸಿಬಿಗೆ ಅಡ್ಡ ನಿಂತು ಕುಟುಂಬಸ್ಥರ ಪ್ರತಿಭಟನೆ
ಶಿವಮೊಗ್ಗ ಜಿಲ್ಲಾಧಿಕಾರಿಗಳು, ಸಾಂಖ್ಯಿಕ ಮತ್ತು ಯೋಜನಾ ಅಧಿಕಾರಿಗಳ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಈಗಾಗಲೇ ನೋಟಿಫಿಕೇಶನ್ ಮಾಡಿರುವ ಆರು ಸಾವಿರ ಎಕರೆ ಜಮೀನಿಗೆ ಇನ್ನೂ ಮೂರು ಸಾವಿರ ಎಕರೆ ಅರಣ್ಯ ಭೂಮಿಯನ್ನು ಸೇರ್ಪಡೆಗೊಳಿಸುವಂತೆ ವರದಿಯಲ್ಲಿ ಪ್ರಸ್ತಾಪಿಸುವಂತೆ ಚರ್ಚಿಸಲಾಯಿತು ಎಂದು ಹೇಳಿದರು.
ಸಭೆಯಲ್ಲಿ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆಯ ಡಿಸಿಎಫ್ ಸಂಜಯ್ ಬಿಜ್ನೂರ್, ಶರಾವತಿ ಮುಳುಗಡೆ ಪ್ರದೇಶದ ರೈತರಾದ ಕಾಳನಾಯ್ಕ, ತಿಮ್ಮಪ್ಪ ಕುಂಬ್ರಿ, ಕೃಷ್ಣಮೂರ್ತಿ, ಸೇರಿದಂತೆ ರೈತ ಮುಖಂಡರು ಹಾಜರಿದ್ದರು.