ಶಿವಮೊಗ್ಗ : ಜಿಲ್ಲೆಯಲ್ಲಿ ಕ್ವಾರೆಂಟೈನ್‍ಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಪರಿಶೀಲನೆ ನಡೆಸಿದ ಅವರು, ತಮ್ಮ ಊರಿನಲ್ಲಿ ಕ್ವಾರೆಂಟೈನ್ ಮಾಡದಂತೆ ಕೆಲವರು ಅಡ್ಡಿ ಪಡಿಸುತ್ತಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇದು ಕಾನೂನು ವಿರೋಧಿ, ಅಂತಹ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.
ಕಂಟ್ರೋಲ್ ರೂಮ್‌ಗೆ ಕರೆ ಮಾಡಿ : ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಬಿಗಿಗೊಳಿಸಿ, ಹೊರಗಿನಿಂದ ಬಂದ ಪ್ರತಿಯೊಬ್ಬರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಮೂಲಕ ಬರುವವರ ಮೇಲೆಯೂ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಸಹ ಈ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ತಮ್ಮ ಊರಿಗೆ, ಪಕ್ಕದ ಮನೆಗೆ ಹೊರಗಿನಿಂದ ಜನರು ಇತ್ತೀಚೆಗೆ ಹೊಸದಾಗಿ ಬಂದಿರುವುದು ಕಂಡು ಬಂದರೆ ತಕ್ಷಣ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ ಸಂಖ್ಯೆ 221010 (08182) ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ತಪಾಸಣೆ ತೀವ್ರಗೊಳಿಸಲಾಗಿದೆ. ಪ್ರತಿ ದಿನ 150 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುವವರ ಮಾಹಿತಿಯನ್ನು ಪ್ರತಿದಿನ ಪಡೆಯಲಾಗುತ್ತಿದೆ. ಉಸಿರಾಟದ ತೊಂದರೆಯಂತಹ ಪ್ರಕರಣಗಳ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಬೇರೆ ರಾಜ್ಯಗಳಿಗೆ ತೆರಳ ಬಯಸುವವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಸರು ನೋಂದಾಯಿಸಿದರೆ ಅವರಿಗೆ ಬೆಂಗಳೂರಿನಿಂದ ರೈಲಿನಲ್ಲಿ ತೆರಳಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸೇವಾ ಸಿಂಧು ಸೌಲಭ್ಯ : ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಬಯಸುವವರು, ಇಲ್ಲಿಂದ ಹೊರ ರಾಜ್ಯಗಳಿಗೆ ತೆರಳಲು ಬಯಸುವವರು ಹಾಗೂ ಬೇರೆ ದೇಶಗಳಿಂದ ಇಲ್ಲಿಗೆ ಬರಲು ಬಯಸುವವರ ಅನುಕೂಲಕ್ಕಾಗಿ ಸರ್ಕಾರ ಸೇವಾ ಸಿಂಧು ಆ್ಯಪ್ ಸೌಲಭ್ಯ ಕಲ್ಪಿಸಿದೆ. ಅಗತ್ಯವಿರುವವರು ಆ್ಯಪ್ ಮೂಲಕ ಹೆಸರು ನೊಂದಾಯಿಸಿ ಪಾಸ್ ಸೌಲಭ್ಯ ಪಡೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ಲೈನ್ ಸಂಖ್ಯೆ 080-22636800 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಎಲ್ ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಶಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.