ಶಿವಮೊಗ್ಗ : ಓಂ ಶಕ್ತಿ ಪ್ರವಾಸ ಮುಗಿಸಿ ವಾಪಸ್ ಆದ ಆರು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಬಿ ಶಿವಕುಮಾರ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸುಮಾರು 82 ಬಸ್ನಲ್ಲಿ ಭಕ್ತರು ಓಂ ಶಕ್ತಿ ತಮಿಳುನಾಡು ಪ್ರವಾಸ ಮುಗಿಸಿ ವಾಪಸ್ ಆಗಿದ್ರು. ಇವರಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.
ಓಂ ಶಕ್ತಿಯಿಂದ ವಾಪಸ್ ಬಂದಿರುವ ಭಕ್ತರಿಗೆ ಮೂರು ಹಂತದಲ್ಲಿ ಕೋವಿಡ್ ತಪಾಸಣೆ ಮಾಡಿದ್ದೇವೆ. 600 ಮಂದಿಗೆ ರ್ಯಾಟ್ ಟೆಸ್ಟ್ ಮಾಡಿದ್ದೇವೆ. ಇದರಲ್ಲಿ ಯಾರಿಗೂ ಪಾಸಿಟಿವ್ ಪತ್ತೆಯಾಗಿಲ್ಲ. ಓಂ ಶಕ್ತಿಯಿಂದ ವಾಪಸ್ಸಾದ ಎಲ್ಲಾ ಭಕ್ತರನ್ನು ಪಾಸಿಟಿವ್ ಅಂತಾನೇ ಟ್ರೀಟ್ ಮಾಡಿ ಹೋಂ ಐಸೋಲೇಷನ್ನಲ್ಲಿ ಇಟ್ಟಿದ್ದೇವೆ. ಹೋಂ ಐಸೋಲೇಷನ್‌ನಲ್ಲಿಟ್ಟು ಕೆಲವರಿಗೆ ಆರ್ಟಿಪಿಸಿಆರ್ ರ್ಯಾಂಡಮ್ ಟೆಸ್ಟ್ ಮಾಡಿದ್ದೇವೆ ಎಂದರು.
ದಿನನಿತ್ಯ ರ್ಯಾಂಡಮ್ ಟೆಸ್ಟ್ ಮಾಡ್ತಿದ್ದೇವೆ. ವಾಪಸ್ ಬಂದ ದಿನವೇ ಪಾಸಿಟಿವ್ ಕಾಣಿಸಿಕೊಳ್ಳುತ್ತೆ ಅಂತಿಲ್ಲ. ಮೂರು ದಿನ ಆದ ನಂತರ ಪಾಸಿಟಿವ್ ಬರಬಹುದು. ನಂತರವೂ ಬರಬಹುದು. ಮುಂಜಾಗ್ರತಾ ಕ್ರಮವಾಗಿ ನಿರಂತರವಾಗಿ ಟೆಸ್ಟ್ ಮಾಡ್ತಿದ್ದೇವೆ.
ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟಲು ಎಲ್ಲಾ ಮುಂಜಾಗ್ರತಾ ಕ್ರಮವಹಿಸಿದ್ದೇವೆ. ಪ್ರತಿದಿನ ಟೆಸ್ಟಿಂಗ್ ಕೆಪಾಸಿಟಿ ಜಾಸ್ತಿ ಮಾಡಿದ್ದೇವೆ. ಪ್ರತಿದಿನ 2 ಸಾವಿರ ಜನರ ಕೋವಿಡ್ ತಪಾಸಣೆ ಮಾಡುತ್ತಿದ್ದೇವೆ. ಪಾಸಿಟಿವ್ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಂಡಿಲ್ಲ ಎಂದರು.
ವೀಕ್ ಎಂಡ್ ಲಾಕ್ಡೌನ್ಗೆ ಕಟ್ಟುನಿಟ್ಟಿನ ಕ್ರಮ : ದಿನದಿಂದ ದಿನಕ್ಕೆ ಹೋಲಿಸಿದರೆ ಪಾಸಿಟಿವ್ ಸಂಖ್ಯೆ ಜಾಸ್ತಿ ಆಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಪಾಲಿಸಲಾಗುತ್ತಿದೆ. ಇಂದು ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ. ಕೊರೊನಾ ಸೋಂಕಿತರಿಗಾಗಿಯೇ ಜಿಲ್ಲೆಯ ಆಸ್ಪತ್ರೆಗಳಲ್ಲಿ 1500 ಬೆಡ್ಗಳನ್ನು ಗುರುತಿಸಿದ್ದೇವೆ. ಐಸಿಯು, ಸ್ಪೆಷಲ್ ಕೇರ್, ನಾರ್ಮಲ್ ಬೆಡ್ ಅಂತಾ ವಿಂಗಡನೆ ಮಾಡಿದ್ದೇವೆ ಎಂದರು.
ಎಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಎಲ್ಲಾ ಉತ್ತಮ ಸ್ಥಿತಿಯಲ್ಲಿವೆ. ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಕೋಟಾದ ಬೆಡ್ಗಳನ್ನು ವಶಕ್ಕೆ ಪಡೆಯುತ್ತೇವೆ.
ಹೊರ ರಾಜ್ಯದಿಂದ ಹಾಗೂ ಆಯಕಟ್ಟಿನ ಸ್ಥಳದಿಂದ ಬರುವವರನ್ನು ಆಶಾ ಕಾರ್ಯಕರ್ತೆಯರ ಮೂಲಕ ಮಾನಿಟರ್ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ತೊಂದರೆ ಆಗುವ ಪರಿಸ್ಥಿತಿ ಇಲ್ಲ. ಕೋವಿಡ್ ವಿಷಯದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಓದಿ: ಪಿಎಂ ಮೋದಿ ದೀರ್ಘಾಯಸ್ಸಿಗೆ ಪ್ರಾರ್ಥಿಸಿ ಹುಬ್ಬಳ್ಳಿಯ ಈಶ್ವರ ದೇವಸ್ಥಾನದಲ್ಲಿ ಹೋಮ-ಹವನ