ಶಿವಮೊಗ್ಗ: ನಗರದಲ್ಲಿ ನಿನ್ನೆ ರಾತ್ರಿ ಕೊಲೆಯಾದ ಹಿಂದೂಪರ ಸಂಘಟನೆಯ ಯುವಕ ಹರ್ಷನ ಮೃತದೇಹದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಹಿನ್ನೆಲೆ ನಗರ ವ್ಯಾಪ್ತಿಯ ಎಲ್ಲ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಡಿಸಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ.
ನಗರದ ರವಿವರ್ಮ ಬೀದಿ, ಸಿದ್ದಯ್ಯ ರಸ್ತೆಯಲ್ಲಿ ಒಂದು ಗುಂಪಿನಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ್ದರು. ಮೆರವಣಿಗೆಯಲ್ಲಿ ಸಚಿವ ಕೆ. ಎಸ್ ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಭಾಗವಹಿಸಿದ್ದರು. ಹರ್ಷನ ಅಂತ್ಯ ಸಂಸ್ಕಾರ ಬಿ.ಹೆಚ್.ರಸ್ತೆಯ ರೋಟರಿ ಚಿತಾಗಾರದಲ್ಲಿ ನಡೆದಿದೆ.
ಇದಕ್ಕೂ ಮುನ್ನ ಹರ್ಷನ ದೇಹವನ್ನು ಮನೆಗೆ ತೆಗೆದುಕೊಂಡು ಹೋಗುವಾಗಲೂ ಕಾರು ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಮೆಗ್ಗಾನ್ ಆಸ್ಪತ್ರೆ ಶವಗಾರದಿಂದ ಸೀಗೆಹಟ್ಟಿಯ ಮನೆಗೆ ತೆಗೆದುಕೊಂಡ ಹೋಗುವಾಗ ಕ್ಲಾರ್ಕ್ ಪೇಟೆ ಮಾರ್ಗವಾಗಿ ತೆರಳುವಾಗ ಘಟನೆ ನಡೆದಿದೆ.
ಘಟನೆಯಿಂದ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸುದ್ದಿ ಸಂಸ್ಥೆಯೊಂದರ ಪೋಟೊಗ್ರಾಫರ್ ಸೇರಿದಂತೆ ಐವರ ತಲೆಗೆ ಗಾಯವಾಗಿದ್ದು, ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ: ಕೊಲೆ ಆರೋಪಿಗಳಲ್ಲಿ ಮೂವರು ಶಿವಮೊಗ್ಗದವರು, ಇಬ್ಬರ ಬಗ್ಗೆ ಶೋಧ ನಡೆಯುತ್ತಿದೆ : ಗೃಹ ಸಚಿವ ಆರಗ