ಶಿವಮೊಗ್ಗ : ಶಿವಮೊಗ್ಗದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾನುವಾರ ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದುವರೆಗೂ ಒಟ್ಟು 60 ಮಂದಿಯನ್ನು ಬಂಧಿಸಲಾಗಿದೆ. ಕಲ್ಲು ತೂರಾಟದಲ್ಲಿ ಒಂದು ಕಾರಿಗೆ ಹಾನಿಯಾಗಿದೆ. ಒಂದು ಆಟೋ, 2 ಬೈಕ್ಗಳಿಗೆ ಹಾನಿಯಾಗಿದೆ. 7 ಮನೆಗಳಿಗೂ ಹಾನಿಯಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಭಾನುವಾರ ನಡೆದ ಈದ್ ಮಿಲಾದ್ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರು ಮಂದಿ ಗಾಯಗೊಂಡಿದ್ದರು. ಅಲ್ಲದೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ತಡೆಯಲು ಬಂದಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಲಾಗಿತ್ತು. ನಂತರ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡರು.
ಸದ್ಯ ರಾಗಿಗುಡ್ಡದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಹಾಗೂ ಆರ್ಎಎಫ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಿನ್ನೆ ರಾತ್ರಿಯಿಂದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪರಿಸ್ಥಿತಿ ಹತೋಟಿಗೆ ಬರುವವರೆಗೂ 144 ಸೆಕ್ಷನ್ ಜಾರಿಯಲ್ಲಿ ಇರುತ್ತದೆ. ನಿನ್ನೆ ಪೂರ್ವ ವಲಯದ ಐಜಿಪಿ ತ್ಯಾಗರಾಜ್ , ಡಿಸಿ ಸೆಲ್ವಮಣಿ ಹಾಗೂ ಎಸಿ ಸತ್ಯನಾರಾಯಣ ಸ್ಥಳದಲ್ಲಿದ್ದರು. ಇಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಲ್ಲು ತೂರಾಟ: ಐಜಿಪಿ ತ್ಯಾಗರಾಜನ್ ಭೇಟಿ, ಪರಿಸ್ಥಿತಿ ಶಾಂತ