ಶಿವಮೊಗ್ಗ : ನಿಶ್ಚಯವಾಗಿದ್ದ ಮದುವೆ ಮುರಿದು ಬಿತ್ತು ಎಂಬ ಕಾರಣಕ್ಕೆ ಯುವಕನೋರ್ವ ದುಡುಕಿನ ನಿರ್ಧಾರದಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಕೋಟೆ ಗ್ರಾಮದಲ್ಲಿ ನಡೆದಿದೆ. ಸ್ವಾಮಿನಾಥ (31) ಹೊಲದಲ್ಲಿ ಸಾವಿಗೆ ಶರಣಾಗಿರುವ ಯುವಕ.
ಆಯನೂರು ಕೋಟೆ ಗ್ರಾಮದ ಬಸವರಾಜಪ್ಪ ಹಾಗೂ ಯಶೋಧ ಎಂಬುವರ ಮಗನಾದ ಸ್ವಾಮಿನಾಥ, ತಂದೆಯ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದನು. ಈತನ ತಂದೆ ಬಹಳ ವರ್ಷಗಳ ಹಿಂದೆಯೇ ತೀರಿಕೊಂಡಿದ್ದು, ಮನೆಯ ಜವಾಬ್ದಾರಿಯನ್ನು ಸ್ವಾಮಿಯೇ ನೋಡಿಕೊಳ್ಳುತ್ತಿದ್ದ. ಓರ್ವ ತಂಗಿ ಸಹ ಇದ್ದು ಆಕೆಯನ್ನು ಮದುವೆ ಮಾಡಿಕೊಡಲಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಸ್ವಾಮಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಕೋಣನತಲೆ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಕಾರಣಾಂತರಗಳಿಂದ ವಿವಾಹ ಮುರಿದು ಬಿದ್ದಿತ್ತು. ಇದರಿಂದ ಮನನೊಂದು ಸ್ವಾಮಿ, ಜಮೀನಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಆತನನ್ನು ಆಯನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ್ದಾನೆ.
ಈ ಕುರಿತು ಸ್ವಾಮಿನಾಥನ ತಾಯಿ ಮಗನ ಮದುವೆ ಮುರಿದು ಬಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರತ್ಯೇಕ ಪ್ರಕರಣಗಳು- ಮನನೊಂದ ಯುವಕ ಆತ್ಮಹತ್ಯೆ : ಕಳೆದ ಜುಲೈ ತಿಂಗಳಲ್ಲಿ ಸಹ ಇಂತಹದೇ ಘಟನೆ ನಡೆದಿತ್ತು. ಪ್ರೀತಿಸಿದ ಯುವತಿ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಮೈಸೂರಿನ ರೈಲ್ವೆ ಇಲಾಖೆಯಲ್ಲಿ ಸಹಾಯಕ ತಾಂತ್ರಿಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದಾವಣಗೆರೆ ಮೂಲದ ಯುವಕನೋರ್ವ ತಾನು ಬಾಡಿಗೆ ಪಡೆದಿದ್ದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಕೇಶವ (30) ಆತ್ಮಹತ್ಯೆಗೆ ಶರಣಾದ ಯುವಕ. ಈತ ಮೈಸೂರಿನ ರೈಲ್ವೆ ಇಲಾಖೆಯಲ್ಲಿ ತಾಂತ್ರಿಕ ಸಹಾಯಕ ಇಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದು, ಕಳೆದ ಎರಡೂವರೆ ವರ್ಷಗಳಿಂದ ತಮ್ಮ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಮದುವೆಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದರು. ಇದರ ನಡುವೆ ಕೇಶವನ ಮನೆಯವರು ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಆದರೆ, ಯುವಕ ಪ್ರೀತಿಯ ಗುಂಗಿನಿಂದ ಹೊರಬಾರಲಾಗದೇ ಸಾವಿಗೆ ಶರಣಾಗಿದ್ದ.
ಇದನ್ನೂ ಓದಿ : ಮದುವೆಗೆ ನಿರಾಕರಿಸಿದ ಪ್ರೀತಿಸಿದ ಯುವತಿ: ಮನನೊಂದ ಯುವಕ ಆತ್ಮಹತ್ಯೆ
ಸಹೋದರಿಯರಿಗೆ ವಿವಾಹವಾಗಿಲ್ಲವೆಂದು ಆತ್ಮಹತ್ಯೆ : ಅಕ್ಕ ಮತ್ತು ತಂಗಿಗೆ ಇನ್ನೂ ಮದುವೆಯಾಗಿಲ್ಲ ಎಂದು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದಿತ್ತು. ಮಹೇಶ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನಿಗೆ ಒಬ್ಬ ತಂಗಿ ಮತ್ತು ಒಬ್ಬಳು ಅಕ್ಕ ಇದ್ದಾರೆ. ಇವರಿಬ್ಬರಿಗೂ ಇನ್ನೂ ವಿವಾಹವಾಗಿರಲಿಲ್ಲ ಎಂದು ಮನನೊಂದು ತಮ್ಮ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.
ಇದನ್ನೂ ಓದಿ : Mysore crime : ಸಹೋದರಿಯರಿಗೆ ವಿವಾಹವಾಗಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ