ಶಿವಮೊಗ್ಗ: ಮಲೆನಾಡು ಭಾಗದಲ್ಲಿ ರೈತರ ಬೆಳೆಗಳನ್ನು ಕಾಡುಕೋಣ, ಮಂಗಗಳು ಸೇರಿದಂತೆ ಕಾಡು ಪ್ರಾಣಿಗಳಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದು, ಮಂಗಗಳಿಗೆ ಪ್ರತ್ಯೇಕ ಆಶ್ರಯ ತಾಣಗಳನ್ನು ನಿರ್ಮಿಸಬೇಕೆಂದು ನಿಟ್ಟೂರಿನ ಶೋಧ ಫಾರ್ಮಸ್ ಪ್ರೊಡ್ಯೂಸರ್ಸ್ ಕಂಪನಿ ಮುಖ್ಯಸ್ಥ ಪುರುಷೋತ್ತಮ್ ಬೆಳ್ಳಕ್ಕಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಲೆನಾಡು ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿ ಹೋಬಳಿಯಲ್ಲಿ ಸುಮಾರು ಮೂರರಿಂದ ಐದು ಕೋಟಿ ರೂ. ಶುಂಠಿ, ಬಾಳೆ, ಅಡಿಕೆ, ಏಲಕ್ಕಿ ಮುಂತಾದ ಬೆಳೆಗಳು ಕಾಡು ಪ್ರಾಣಿಗಳಿಂದ ನಾಶವಾಗಿವೆ. ಹಾಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು. ಅನೇಕ ವರ್ಷಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದ್ದು, ಅಡಿಕೆ, ಬಾಳೆ, ಏಲಕ್ಕಿ ಸಂಪೂರ್ಣ ಹಾಳು ಮಾಡುತ್ತಿವೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಮಂಗಗಳಿಗೆ ಪ್ರತ್ಯೇಕ ಆಶ್ರಯ ತಾಣಗಳನ್ನು ನಿರ್ಮಿಸಬೇಕು ಹಾಗೂ ರೈತರ ಜಮೀನಿಗೆ ಸರ್ಕಾರವೇ 70:30ರ ಅನುಪಾತದಲ್ಲಿ ರಕ್ಷಣಾ ಬೇಲಿ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಂಗಗಳಿಗೆ ಪ್ರತ್ಯೇಕ ಆಶ್ರಯ ತಾಣವನ್ನ ನಿರ್ಮಿಸುವುದರಿಂದ ಮಲೆನಾಡಿನಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆಯನ್ನು ಸಹ ನಿಂಯತ್ರಿಸಬಹುದು. ಹಾಗಾಗಿ ಸರ್ಕಾರ ಕೂಡಲೇ ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.