ಶಿವಮೊಗ್ಗ: ಪ್ರಕೃತಿಯಲ್ಲಿ ಹಲವು ಕೌತುಕ, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಹಾಗೆಯೇ ಇಲ್ಲೂಂದು ಹಸು ಜಮೀನಿನಲ್ಲಿರುವ ಕಲ್ಲಿಗೆ ಹಾಲು ನೀಡುವ ಮೂಲಕ ಕೌತುಕಕ್ಕೆ ಕಾರಣವಾಗಿದೆ. ಹೊಸನಗರ ತಾಲೂಕು ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾದಾಪುರ ಎಂಬ ಗ್ರಾಮದಲ್ಲಿ ಈ ಅಚ್ಚರಿ ನಡೆದಿದೆ.
ಈ ಗ್ರಾಮದ ಪುಂಡಲಿಕ ಶೇಟ್ ಎಂಬುವರ ಮನೆಯ ಹಸು ಕಳೆದ ಒಂದು ತಿಂಗಳಿನಿಂದ ಅವರದೇ ಜಮೀನಿನಲ್ಲಿ ಇರುವ ಕಲ್ಲಿಗೆ ಪ್ರತಿನಿತ್ಯ ಹಾಲು ಸುರಿಸಿ ಬರುತ್ತಿದೆ. ಇದು ವಿಸ್ಮಯ ಎನಿಸಿದರೂ ಸಹ ಸತ್ಯವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಪುಂಡಲಿಕ ಶೇಟ್ ಅವರ ಮನೆಯ ಹಸು ಕರುವಿಗೆ ಜನ್ಮ ನೀಡಿತ್ತು. ಆದರೆ ದುರದೃಷ್ಟವಶಾತ್ ಕರು ಒಂದೆರಡು ದಿನದ ಬಳಿಕ ಸಾವನ್ನಪ್ಪಿತ್ತು. ಇದಾದ ನಂತರ ಹಾಲನ್ನು ಒಂದು ತಿಂಗಳವರೆಗೂ ಮನೆಯವರು ಕರೆದಿದ್ದಾರೆ.
ಪುಂಡಲಿಕ ಶೇಟ್ ಅವರ ಅಣ್ಣನ ಮಗ ಹಸು ಪ್ರತಿನಿತ್ಯ ಮನೆಯಿಂದ ಹೊರಟು ಸೀದಾ ತಮ್ಮ ಜಮೀನಿಗೆ ಹೋಗಿ ಅಲ್ಲಿನ ಕಲ್ಲಿನ ಮೇಲೆ ಎರಡು ಮೂರು ನಿಮಿಷಗಳವರೆಗೆ ಹಾಲು ಸುರಿಸುವುದನ್ನು ನೋಡಿದ್ದಾರೆ.
ಹೀಗೆ ಒಂದು ವಾರಗಳ ಕಾಲ ಹಸು ಹಾಲು ನೀಡುವುದನ್ನು ಕಂಡಿದ್ದಾರೆ. ಅಚ್ಚರಿ ಅಂದರೆ ದಿನಕ್ಕೆ ಎರಡು ಬಾರಿ ಹಾಲು ಸುರಿಸಿ ಮನೆಗೆ ವಾಪಸಾಗುತ್ತದೆ.
ಪ್ರವರ್ಧಮಾನಕ್ಕೆ ಬರಲಿದ್ಯಾ ದೇವಾಲಯ
ಹಿಂದೆ ಗ್ರಾಮಸ್ಥರು ಶಾಸ್ತ್ರ ಕೇಳಿದಾಗ ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಪುರಾತನ ಕಾಲದ ದೇವಾಲಯವಿದೆ. ಅಲ್ಲಿ ಲಿಂಗಮುದ್ರೆ ಕಲ್ಲಿದೆ. ಈ ದೇವಾಲಯ ಮುಂದೆ ಪ್ರವರ್ಧಮಾನಕ್ಕೆ ಬರುತ್ತದೆ ಎಂದು ತಿಳಿಸಿದ್ದಾರಂತೆ. ಈಗ ಹಸು ಹಾಲು ನೀಡುತ್ತಿರುವುದು ಇದೇ ಈಶಾನ್ಯ ಭಾಗದಲ್ಲಿ. ಹಸು ಹಾಲು ನೀಡುತ್ತಿರುವುದು ಇದೇ ಲಿಂಗಮುದ್ರೆ ಕಲ್ಲಿನ ಮೇಲಿಯೇ ಎಂಬ ಅನುಮಾನ ಬಂದಿದೆ. ಮುಂದೆ ಇದರ ಸಂಶೋಧನೆ ನಡೆದಾಗ ಈ ಬಗ್ಗೆ ಖಚಿತ ಮಾಹಿತಿ ಹೊರ ಬೀಳಲಿದೆ.
ಪಶು ವೈದ್ಯರು ಹೇಳಿದ್ದೇನು?
ಇತ್ತ ಈ ಅಚ್ಚರಿ ಘಟನೆ ಕುರಿತು ಮಾತನಾಡಿರುವ ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ. ಟಿ.ಎಂ.ಸದಾಶಿವ, ಹೆಚ್ಚು ಹಾಲು ನೀಡುವ ಹಸುವಿನಲ್ಲಿ ಹಾಲಿನ ಒತ್ತಡದಿಂದ ಹಾಲನ್ನು ಹೊರ ಹಾಕುತ್ತವೆ. ಹಸುವಿನ ಕರು ಸತ್ತಿದೆ. ಇದರಿಂದ ಹಸುವಿನ ಕೆಚ್ಚಲಲ್ಲಿ ಹೆಚ್ಚಿನ ಹಾಲು ಸಂಗ್ರಹವಾಗಿದೆ. ಹಸುವಿನಲ್ಲಿ ಹೆಚ್ಚಿನ ಹಾಲು ಸಂಗ್ರಹವಾದಾಗ ಅದರ ಕೆಚ್ಚಲಿನಲ್ಲಿ ಉರಿ-ತುರಿಕೆ ಪ್ರಾರಂಭವಾಗುತ್ತದೆ. ಇದರಿಂದ ಹಸು ಕಲ್ಲು ಅಥವಾ ಇತರೆ ಕಡೆ ಹೋಗಿ ತುರಿಸಿಕೊಂಡು ಹಾಲು ಹೊರ ಬಿಡುತ್ತದೆ ಎಂದಿದ್ದಾರೆ.
ಒಮ್ಮೊಮ್ಮೆ ಹಾಲು ಹೆಚ್ಚಾದಾಗ ಹಸು ಮಲಗಿರುವ ಜಾಗದಲ್ಲಿಯೇ ಹಾಲನ್ನು ಸುರಿಸುತ್ತಿರುತ್ತದೆ. ಹೆಚ್ಚು ಹಾಲು ಸಂಗ್ರಹವಾದ ಹಸುಗಳಲ್ಲಿ ಇದು ಸಮಾನ್ಯ ಪ್ರಕ್ರಿಯೆಯಾಗಿದೆ. ಇದರಲ್ಲಿ ಅಚ್ಚರಿ ಏನಿಲ್ಲ. ಹೆಚ್ಚು ಹಾಲು ನೀಡುವ ಹಸುಗಳಲ್ಲಿ ಹಾಲು ಹಿಂಡದೆ ಹೋದಾಗ ಈ ರೀತಿ ಹಾಲನ್ನು ಹೊರ ಹಾಕುತ್ತವೆ ಎಂದಿದ್ದಾರೆ.