ಶಿವಮೊಗ್ಗ: ದಾವಣಗೆರೆ ಜಿಲ್ಲಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್ ಜಮೀರ್ ಅಲಿಯಾಸ್ ಬಚ್ಚಾನಿಗೆ ಶಿವಮೊಗ್ಗದ 3ನೇ ಸತ್ರ ನ್ಯಾಯಾಲಯವು 2ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 20ಸಾವಿರ ರೂ. ದಂಡ ವಿಧಿಸಿದೆ.
ರೌಡಿಶೀಟರ್ ಜಮೀರ್ ಅಲಿಯಾಸ್ ಬಚ್ಚಾನ ವಿರುದ್ದ ದಾವಣಗೆರೆಯ 1ನೇ ಜೆಎಂಎಫ್ಸಿ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಜಾರಿ ಮಾಡಿದ್ದರಿಂದ ದಾವಣಗೆರೆ ಪೊಲೀಸರು ಬಂಧಿಸಲು ಬಚ್ಚಾನ ಮನೆಗೆ ತೆರಳಿದ್ದ ವೇಳೆ ಪೊಲೀಸ್ ಸಿಬ್ಬಂದಿಗಳಾದ ಪರಶುರಾಮಪ್ಪ ಹಾಗೂ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದನು. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ 314/2016 ಕಲಂ 504 506, 353, 308, 333ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ಕೋರ್ಟ್ಗೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಈ ಕುರಿತು ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ಬಚ್ಚಾ ನಡೆಸಿದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಕೆ. ಮಾನು ಆರೋಪಿಗೆ 2ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 20ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಿದ್ದಾರೆ. ಸಂತ್ರಸ್ತರ ಪರ ಸರ್ಕಾರಿ ವಕೀಲ ಶಾಂತರಾಜ್ ವಾದ ಮಂಡಿಸಿದ್ದರು.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪ್ರಾಪ್ತನಿಗೆ 7 ವರ್ಷ ಕಾರಾಗೃಹ ಶಿಕ್ಷೆ
ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3ವರ್ಷದ ಬಾಲಕಿಯ ಮೇಲೆ 17ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ದೂರಿನ ಮೇರೆಗೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕನ ವಿರುದ್ಧ ಪೊಲೀಸರು FTSC-1 ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಈ ಕುರಿತು ವಾದ ಅಲಿಸಿದ ನ್ಯಾಯಾಧೀಶರಾದ ಲತಾ ಅವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದ್ದರು. ಒಂದು ವೇಳೆ ಹಣ ಕಟ್ಟಲು ವಿಫಲವಾದ್ರೆ ಹೆಚ್ಚುವರಿ 1 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದರು. ಸಂತ್ರಸ್ತರ ಪರ ಸರ್ಕಾರಿ ವಕೀಲರಾದ ಹರಿಪ್ರಸಾದ್ ಹಾಗೂ ಮಮತ ವಾದ ಮಂಡಿಸಿದ್ದರು.
ಇದನ್ನೂ ಓದಿ: ಪ್ರತ್ಯೇಕ 3 ಪೋಕ್ಸೊ ಪ್ರಕರಣ: ಅಪರಾಧಿಗಳಿಗೆ ದಂಡಸಮೇತ ಜೈಲು ಶಿಕ್ಷೆ ವಿಧಿಸಿ ತ್ವರಿತಗತಿ ವಿಶೇಷ ನ್ಯಾಯಾಲಯ ತೀರ್ಪು