ಶಿವಮೊಗ್ಗ : ಜಿಲ್ಲೆಯ ಅಧಿಕಾರಿಗಳ ಬೇಜವ್ದಾರಿ ಮತ್ತು ನಿರ್ಲಕ್ಷ್ಯದಿಂದ 2019 ಮಾರ್ಚ್ ಹೊತ್ತಿಗೆ ಪೂರ್ಣಗೊಳ್ಳಬೇಕಿದ್ದ ಸರ್ಕಾರದ ಮಹತ್ವಕಾಂಕ್ಷಿ 'ನಿರಂತರ ಜ್ಯೋತಿ ಯೋಜನೆ' ಇನ್ನೂ ಪೂರ್ಣಗೊಳ್ಳದೆ, ಕೆಲವು ಕಡೆ ಆರಂಭವಾಗದೆ ಹಳ್ಳ ಹಿಡಿದಿದೆ.
ಗ್ರಾಮೀಣ ಭಾಗಕ್ಕೆ ಕಡಿಮೆ ಯೂನಿಟ್ ದರದಲ್ಲಿ ನಿರಂತರ ವಿದ್ಯುತ್ ನೀಡುವ ಸರ್ಕಾರದ ಉತ್ತಮವಾದ ಯೋಜನೆ ಇದಾಗಿದೆ. ಆದರೆ, ಅಧಿಕಾರಿಗಳ ಅಸಡ್ಡೆ, ಭ್ರಷ್ಟಾಚಾರ, ಬೇಜವ್ದಾರಿಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ. ಇದರಿಂದ ಗ್ರಾಮೀಣ ಭಾಗಕ್ಕೆ ಯೋಜನೆ ತಲುಪುವಲ್ಲಿ ವಿಫಲವಾಗಿದೆ.
ಈ ನಡುವೆ ನಿರಂತರ ಜ್ಯೋತಿ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯೋಜನೆ ಅನುಷ್ಠಾನಗೊಳ್ಳಲು ಅಡ್ಡಿಯಾಗಿದ್ದಾರೆ ಎಂದು ಹೇಳಲಾಗ್ತಿದೆ.
ಓದಿ : ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ : ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಆರೋಪ
ಈ ಸಂಬಂಧ ಮೆಸ್ಕಾಂ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಯೋಜನೆ ವಿಳಂಬ ಮತ್ತು ಯೋಜನೆಯಲ್ಲಿ ಕಳಪೆ ವಸ್ತುಗಳ ಬಳಕೆ ಮಾಡಲಾಗಿದೆ ಎಂದು ನೇರವಾಗಿಯೇ ಆರೋಪ ಮಾಡಿದ್ದರು. ಅಲ್ಲದೆ, ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಆದರೆ, ಆ ಸಚಿವರ ಆವೇಶ ಆ ಸಭೆಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಟೆಂಡರ್ನಲ್ಲಿ, ಉಲ್ಲೇಖಿಸಿರುವ ಸಾಮಗ್ರಿಗಳನ್ನು ಯಾಕೆ ಬಳಸಿಲ್ಲ. ಈ ಬಗ್ಗೆ ಕಂಟ್ರಾಕ್ಟರ್ ಅನ್ನು ಪ್ರಶ್ನಿಸಬೇಕು. ಅದರಲ್ಲೂ, ಸಾಮಗ್ರಿಗಳನ್ನು ಹಾಕದೆ ಬಿಲ್ ಕೂಡ ಮಾಡಿಸಿಕೊಂಡಿದ್ದಾರೆ. ಯೋಜನೆಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ವರದಿ ಹಸ್ತಾಕ್ಷರ ಸಹಿತವಾಗಿ ನೀಡಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದರು.
ಓದಿ : ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ಅಕ್ರಮ: ಸೂಕ್ತ ತನಿಖೆಗೆ ಕೆ.ಎಸ್.ಈಶ್ವರಪ್ಪ ಸೂಚನೆ
ಆದರೆ, ಸಭೆ ನಡೆದು 7 ತಿಂಗಳು ಕಳೆಯುತ್ತಾ ಬಂದರೂ, ಇದುವರೆಗೆ ಯವುದೇ ಬದಲಾವಣೆ ಆಗಿಲ್ಲ. ಯೋಜನೆ ಹಾಗೇಯೇ ಇದೆ. ಈ ವಿಚಾರವನ್ನು ಸ್ವತಃ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಒಪ್ಪಿಕೊಂಡಿದ್ದಾರೆ.
ನಿರಂತರ ಜ್ಯೋತಿ ಯೋಜನೆಯ ಫೀಡರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸರ್ಕಾರ, ಅದರಲ್ಲೂ ಸಿಎಂ ತವರು ಜಿಲ್ಲೆಯಲ್ಲಿಯೇ ಯೋಜನೆಯೊಂದು ಹಳ್ಳ ಹಿಡಿದಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಸರ್ಕಾರ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.