ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದ್ದ ಆಯುರ್ವೇದ ವೈದ್ಯಪದ್ಧತಿ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬರಲಾರಂಭಿಸಿದೆ. ಅದು ಮಾರಕ ಕೊರೊನಾ ಕಾರಣದಿಂದ ಎಂಬುದು ವಿಶೇಷ. ದಿನೇ ದಿನೇ ಸೋಂಕಿತರ ಸಂಖ್ಯೆ ಜತೆಗೆ, ಮೃತಪಡುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಕಾರಣ ರೋಗ ನಿರೋಧಕ ಶಕ್ತಿಯ ಕೊರತೆ.
ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹ ವ್ಯಕ್ತಿಗಳನ್ನು ಕೊರೊನಾ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಕಾರಣದಿಂದಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕಾಗಿ ಜನರು ಆಯುರ್ವೇದ ಪದ್ಧತಿಯ ಕಡೆ ಮುಗಿಬೀಳತೊಡಗಿದ್ದಾರೆ.
ಇನ್ನೂ ಕೊರೊನಾಗೆ ಈವರೆಗೂ ಸಹ ಸೂಕ್ತ ಚಿಕಿತ್ಸೆ ಲಭ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಕೊರೊನಾದಿಂದ ತಪ್ಪಿಸಿಕೊಳ್ಳಲು ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಿರುವುದು ತುರ್ತು ಅಗತ್ಯ. ಹೀಗಾಗಿಯೇ ಜನರು ಹೆಚ್ಚಾಗಿ ಆಯುರ್ವೇದ ವೈದ್ಯ ಪದ್ಧತಿಯ ಕಡೆ ಆಕರ್ಷಿತರಾಗಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಪುಡಿಗಳು, ಮಾತ್ರೆ, ಚವನಪ್ರಾಶ್ ಮತ್ತಿತರ ಆಯುರ್ವೇದ ಸಂಯೋಜನೆಗಳನ್ನು ಬಳಸಲು ಮುಂದಾಗಿದ್ದಾರೆ. ಕೊರೊನಾ ಮಾತ್ರವಲ್ಲದೇ ಬೇರೆ ಬೇರೆ ಕಾಯಿಲೆಗಳ ಬಗ್ಗೆ ಆಯುರ್ವೇದ ಪದ್ಧತಿಯಲ್ಲಿನ ಪರಿಹಾರ ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ವೈದ್ಯರ ಮೂಲಕ ಕಲೆಹಾಕುತ್ತಿದ್ದಾರೆ.