ಶಿವಮೊಗ್ಗ: ಜಿಲ್ಲೆಯಲ್ಲಿ ಪೊಲೀಸರ ಬಂದೂಕು ಮತ್ತೆ ಸದ್ದು ಮಾಡಿದೆ. ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಅಸ್ಲಾಂ ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿದೆ. ಅ.30 ರಂದು ಶಿವಮೊಗ್ಗದ ಬಿ.ಹೆಚ್.ರಸ್ತೆಯ ರಾಯಲ್ ಆರ್ಕಿಡ್ ಮುಂಭಾಗ ಅಶೋಕ್ ಪ್ರಭು ಎಂಬುವರಿಗೆ ನಾಲ್ವರು ಹರಿತವಾದ ಅಯುಧದಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಸಾಗರದ ಆಸೀಫ್ ಅಲಿಯಾಸ್ ಚಿಲ್ಲಿ ಎಂಬಾತನ ಬಂಧನವಾಗಿತ್ತು.
ಅಸ್ಲಾಂ ಶಿವಮೊಗ್ಗ ಹೊರ ವಲಯದ ಹೊಳೆಹೊನ್ನೂರು ರಸ್ತೆಯ ರಾಶಿ ಡೆವಲಪರ್ಸ್ನಲ್ಲಿ ಅಡಗಿ ಕುಳಿತಿದ್ದ. ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಎಸ್ಐ ವಸಂತ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಬಂಧನಕ್ಕೆ ಮುಂದಾಗಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ರಮೇಶ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ವಸಂತ ಕುಮಾರ್ ಅಸ್ಲಾಂ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಗಾಯಾಳು ಅಸ್ಲಾಂ ಹಾಗೂ ಪೊಲೀಸ್ ಸಿಬ್ಬಂದಿ ರಮೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅ.26 ರಂದು ವೆಂಕಟೇಶ ನಗರದಲ್ಲಿ ವಿಜಯ್ ಎಂಬುವರ ಕೊಲೆ ಕೇಸ್ನಲ್ಲಿ ಜಬೀ ಎಂಬಾತ ಪೊಲೀಸ್ ಮಹಜರು ವೇಳೆ ತಪ್ಪಿಸಿಕೊಂಡು ಹೋಗುವಾಗ ಆತನ ಕಾಲಿಗೂ ಪೊಲೀಸರು ಗುಂಡು ಹೊಡೆದಿದ್ದರು. ಕಳೆದ 10 ದಿನದ ಅಂತರದಲ್ಲಿ 2ನೇ ಗುಂಡೇಟಿನ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನ: ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡೇಟು