ಶಿವಮೊಗ್ಗ: ಮಹಾನಗರ ಪಾಲಿಕೆಯ ತಡೆ ಇದ್ದರೂ ಸಹ ಬಹು ಮಹಡಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಅಧಿಕಾರಿಗಳು ತಡೆದಿದ್ದಾರೆ.
ನಗರದ ಜಯನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಕಳೆದ ಆರು ತಿಂಗಳ ಹಿಂದೆ ನೆಲ ಅಂತಸ್ತು ನಿರ್ಮಾಣ ಮಾಡಲು ಮಣ್ಣು ತೆಗೆದಾಗ ಅಕ್ಕಪಕ್ಕದ ಮನೆಗಳು ಬಿರುಕುಗೊಂಡು ಗೋಡೆಗಳು ಕುಸಿಯಲಾರಂಭಿಸಿದ್ದವು. ಇದರಿಂದ ಬಿಲ್ಡಿಂಗ್ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಹಿತರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದ್ದರಿಂದ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಮೇಯರ್ ಆಗಮಿಸಿ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಿ ಲೈಸಸ್ಸ್ ರದ್ದು ಮಾಡಿದ್ದರು.
ಸದ್ಯ ಆರು ತಿಂಗಳಿನಿಂದ ಸುಮ್ಮನಿದ್ದ ಕಟ್ಟಡದ ಮಾಲೀಕರು ಮತ್ತೊಮ್ಮೆ ಗೋಡೆ ಕಟ್ಟುವ ನೆಪದಲ್ಲಿ ಸುತ್ತ ಪಿಲ್ಲರ್ ಹಾಕಲು ಶುರು ಮಾಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಮತ್ತು ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯವರು ಪಾಲಿಕೆಯ ಗಮನಕ್ಕೆ ತಂದರು. ಸ್ಥಳಕ್ಕೆ ಪಾಲಿಕೆ ಆಯುಕ್ತೆ ಚಾರುಲತ ಸೋಮಲ್ ಮತ್ತು ಉಪ ಮೇಯರ್ ಚನ್ನಬಸಪ್ಪ ಹಾಗೂ ಇಂಜಿನಿಯರ್ಗಳು ಭೇಟಿ ನೀಡಿ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಿದರು.
ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನ ಖಂಡಿಸಿದ ಅಧಿಕಾರಿಗಳು, ಕೇವಲ ಗೋಡೆ ನಿರ್ಮಾಣ ಮಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು. ಜಯನಗರ ವಾರ್ಡ್ ಇಂಜಿನಿಯರ್ ಅವರನ್ನ ತೀವ್ರ ತರಾಟೆಗೆ ತೆಗೆದುಕೊಳ್ಳಲಾಯಿತು.
ಹಿಂದೆ ಒಂದು ನೋಟಿಸ್ ನೀಡಲಾಗಿತ್ತು. ಈಗ ಮತ್ತೊಂದು ನೋಟಿಸ್ ನೀಡಲಾಗುತ್ತದೆ. ಸ್ಥಳೀಯ ಜನರ ಹಿತ ರಕ್ಷಣೆಯನ್ನು ಮಹಾನಗರ ಪಾಲಿಕೆ ಕಾಪಾಡುತ್ತದೆ ಎಂದು ಉಪ ಮೇಯರ್ ಚನ್ನಬಸಪ್ಪ ಹೇಳಿದರು
ಜನಸಮಾನ್ಯರು ವಾಸಿಸುವ ಜಾಗದಲ್ಲಿ ಬಹು ಮಹಡಿ ಕಟ್ಟಡ ಕಟ್ಟಲು ಅನುಮತಿ ನೀಡಿದ್ದು ಎಷ್ಟು ಸರಿ, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಿಂದೆ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ತಿಳಿಸಿದ್ದ ಪಾಲಿಕೆ ಈಗ ಮತ್ತೊಮ್ಮೆ ನೋಟಿಸ್ ನೀಡುವುದಾಗಿ ಹೇಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ನಾಗರಿಕ ಹಿತ ರಕ್ಷಣಾ ವೇದಿಕೆಯ ಡಾ. ಸುರೇಂದ್ರ ಶೆಟ್ಟಿ ಆರೋಪಿಸಿದರು.