ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಹಿಂದೆ ಚುನಾವಣೆ ವೇಳೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಬಿಜೆಪಿಯವರು ನೀಡಿರುವ ಭರವಸೆಗಳ ಕುರಿತು ಶಿವಮೊಗ್ಗ ಜಿಲ್ಲೆಯಲ್ಲಿ ಆಂದೋಲನ ನಡೆಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು. ಜಿಲ್ಲೆಯ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದ 25 ಜನ ಸಂಸದರು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದ ಭರವಸೆಯ ಕುರಿತು ಮೊದಲು ಮಾತನಾಡಲಿ. ಈಗ ಅವರೆಲ್ಲ ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗ್ತಾರೆ ಎಂದು ಪ್ರಶ್ನಿಸಿದರು. ನಮ್ಮ ಭರವಸೆಗಳು ಜಾರಿಗೆ ಬಂದ ನಂತರ ದೊಡ್ಡ ಅಭಿಯಾನ ನಡೆಸುತ್ತೇವೆ. 15 ಲಕ್ಷ ರೂ, ಹಾಗೂ 2 ಕೋಟಿ ಉದ್ಯೋಗ ನೀಡುವ ಕುರಿತು ಅವರು ನೀಡಿದ್ದ ಭರವಸೆಗಳ ಬಗ್ಗೆ ಹೋರಾಟ ನಡೆಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ಜೊತೆ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆಗಳನ್ನು ತರಬೇಕೆಂದು ಮಾತನಾಡಿದ್ದೇವೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ, ನ್ಯೂನತೆಗಳಿವೆ. ಬಿಜೆಪಿ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಸಂವಿಧಾನವನ್ನು ಬುಡಮೇಲು ಮಾಡಿ, ಮಹಾನ್ ಸಾಹಿತಿಗಳು ಮತ್ತು ಈ ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಕಡೆಗಣಿಸಿ, ಬೇರೆ ಬೇರೆ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿರುವುದರಿಂದ ಮಕ್ಕಳಿಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ. ಅದಕ್ಕೆ ಪುನರ್ ಪರಿಶೀಲನೆಯಾಗಬೇಕು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಶಿಕ್ಷಣ ಕ್ಷೇತ್ರ ತುಂಬಾ ದುಬಾರಿಯಾಗಿದೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಓದಲೂ ಆಗುತ್ತಿಲ್ಲ, ಅದಕ್ಕಾಗಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳಿದ್ದೇವೆ, ನೀವು ಯುವಕರಿದ್ದೀರಾ, ಬಹಳಷ್ಟು ಸುಧಾರಣೆ ತರಬೇಕಾಗುತ್ತದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ಹೈಟೆಕ್ ಮಾಡಬೇಕು ಎಂದು ಅವರಲ್ಲಿ ಈಗಾಗಲೇ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿನ ಅವಾಂತರಗಳು ನಿಮಗೆ ಗೊತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಬಳಿಯೂ ಮಾತನಾಡಿದ್ದೇವೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಳಪೆ ಗುಣಮಟ್ಟದ ಕಾಮಗಾರಿಗಳಾಗಿವೆ. ಯಾರಿಗೂ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂದರು.
ಎಂಆರ್ಐ ಸ್ಕ್ಯಾನ್ ನಡೆಸಲ್ಲ. 140 ಮಂದಿ ವೈದ್ಯರು ಇದ್ದಾರೆ. ಅವರು ಸರಿಯಾಗಿ ಅರ್ಧ ಗಂಟೆ ಒಪಿಡಿಯಲ್ಲಿ ಇರಲ್ಲ, ಸಹಿ ಹಾಕಿ ತಮ್ಮ ಕ್ಲಿನಿಕ್ಗಳಿಗೆ ತೆರಳುತ್ತಾರೆ. ಇನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಗುತ್ತಿಗೆ ಆಧಾರದಲ್ಲಿ ಕೆಲಸದವರನ್ನು ತೆಗೆದುಕೊಳ್ಳಲು 1 ಲಕ್ಷ ರೂ ಪಡೆದಿದ್ದಾರೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಗಾಗಿ ಮುಂದಿನ ವಾರದಿಂದ ಜಿಲ್ಲಾ ಕಾಂಗ್ರೆಸ್ ತಯಾರಿ ನಡೆಸಲು ಪ್ರಾರಂಭಿಸುತ್ತದೆ. ನಾನು ಕಳೆದ ಬಾರಿ ಲೋಕಸಭೆ ಚುನಾವಣೆಯ ಆಕಾಂಕ್ಷಿಯಾಗಿದ್ದೆ. ಈ ಬಾರಿ ನಾನು ಆಕಾಂಕ್ಷಿ ಅಲ್ಲ, ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: 'ಅರ್ಥರಹಿತ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ': ಪ್ರತಾಪ್ ಸಿಂಹಗೆ ಸಚಿವ ಹೆಚ್.ಸಿ.ಮಹದೇವಪ್ಪ ಟಾಂಗ್