ಶಿವಮೊಗ್ಗ: ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕಮಲ ರೂಪದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದ ಟರ್ಮಿನಲ್ಗೆ ಹೊದಿಕೆ ಹಾಕುವಂತೆ ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದರಿಂದ ಕೂಡಲೇ ಚುನಾವಣಾ ಆಯೋಗ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಚುನಾವಣೆ ಮುಗಿಯುವವರೆಗೂ ಹೊದಿಕೆ ಹಾಕಿ ಮುಚ್ಚಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಮಲ ಆಕಾರದ ವಿಮಾನ ನಿಲ್ದಾಣದ ಟರ್ಮಿನಲ್ ಪೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಇದು ನಮ್ಮ ಸಾಧನೆ ಎಂದು ಬಿಜೆಪಿ ಪಕ್ಷ ಬಿಂಬಿಸುತ್ತಿದೆ ಹಾಗಾಗಿ ಚುನಾವಣೆ ಮುಗಿಯುವವರೆಗೂ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಸಂಪೂರ್ಣ ಪರದೆಯಿಂದ ಮುಚ್ಚಬೇಕು ಹಾಗೂ ಸಾರಿಗೆ ಬಸ್ಗಳಲ್ಲಿ ಇರುವ ಸರ್ಕಾರದ ಜಾಹೀರಾತುಗಳನ್ನು ಸಹ ತೆರವು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೆಂದ್ರಪ್ಪ ಹಾಗೂ ಕವಿತಾ ರಾಘವೇಂದ್ರ, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಚುನಾವಣಾ ಆಯೋಗಕ್ಕೆ ಪತ್ರ ಬರೆದ ವಕೀಲರು: ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ನಟ ಸುದೀಪ್ ಹೇಳಿದ ಹಿನ್ನೆಲೆಯಲ್ಲಿ ಅವರ ಚಲನಚಿತ್ರ ಹಾಗೂ ಟಿವಿ ಶೋಗಳನ್ನು ಪ್ರಸಾರ ಮಾಡದಂತೆ ಒತ್ತಾಯಿಸಿ ಶಿವಮೊಗ್ಗದ ವಕೀಲ ಹಾಗೂ ಸಾಮಾಜಿಕ ಹೋರಾಟಗಾರರಾದ ಕೆ.ಪಿ. ಶ್ರೀಪಾಲ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಅಗತ್ಯ ಕ್ರಮ ಜರುಗಿಸಬೇಕೆಂದು ಪತ್ರ ಆಗ್ರಹಿಸಿದ್ದರು.
ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕ ಆಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಸುದೀಪ್ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರಮಂದಿರ ಹಾಗೂ ಟಿ.ವಿ.ಗಳಲ್ಲಿ ಪ್ರದರ್ಶನ ಆಗಬಾರದು. ಅಲ್ಲದೆ, ಸುದೀಪ್ ನಡೆಸಿಕೊಡುವ ಟಿ.ವಿ. ಶೋಗಳು ಹಾಗೂ ಅವರ ನಟನೆಯ ಜಾಹೀರಾತುಗಳು ಸಹ ಪ್ರಸಾರ ಮಾಡದಂತೆ ಚುನಾವಣಾ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಶ್ರೀಪಾಲ್ ಮನವಿ ಮಾಡಿದ್ದರು.
ಜೆಡಿಎಸ್ ಪಕ್ಷದಿಂದ ದೂರು: ಇದಾದ ಬಳಿಕ ಶುಕ್ರವಾರ ಜೆಡಿಎಸ್ ಕೂಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಸುದೀಪ್ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದು, ಚುನಾವಣೆ ಮುಗಿಯುವವರೆಗೂ ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮತ್ತು ಪ್ರಚಾರ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವಂತೆ ಆಗ್ರಹಿಸಿ ಜೆಡಿಎಸ್ ಕಾನೂನು ಘಟಕವು ಆಯೋಗಕ್ಕೆ ದೂರು ನೀಡಿದೆ. ಸುದೀಪ್ ಪ್ರಸ್ತುತ ಬಿಜೆಪಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಆದ್ದರಿಂದ ಅವರ ಚಿತ್ರ, ಜಾಹೀರಾತು, ಪೋಸ್ಟರ್ ಮುಂತಾದವುಗಳನ್ನು ಬಿತ್ತರಿಸಿದರೆ ಮತಗಳ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಚುನಾವಣೆ ಮುಗಿಯುವ ತನಕ ಅವರ ಯಾವುದೇ ಶೋ ಮತ್ತು ಭಾವಚಿತ್ರವಿರುವ ಜಾಹೀರಾತುಗಳ ಪ್ರಸಾರಕ್ಕೆ ತಡೆ ನೀಡಬೇಕೆಂದು ಜೆಡಿಎಸ್ ರಾಜ್ಯ ವಕ್ತಾರ, ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಚುನಾವಣಾಧಿಕಾರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಕೋರಿದ್ದರು.
ಇದನ್ನೂ ಓದಿ: ಚುನಾವಣೆ ವೇಳೆ ಅಮುಲ್ ವಿವಾದ.. ಕಾಂಗ್ರೆಸ್- ಜೆಡಿಎಸ್ ಆಕ್ಷೇಪ ಏಕೆ?.. ಈ ಬಗ್ಗೆ ಬಿಜೆಪಿ ನಿಲುವೇನು?