ಶಿವಮೊಗ್ಗ: ಕಾಂಗ್ರೆಸ್ ನವರು ಇನ್ನೂ 20 ವರ್ಷ ಪ್ರತಿಪಕ್ಷದ ಬೆಂಚ್ ನಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ಕಾಂಗ್ರೆಸ್ ಎಂಎಲ್ಸಿ ಮಂಜುನಾಥ್ ಭಂಡಾರಿಯವರ ಅಭಿನಂದನಾ ಸಮಾರಂಭದಲ್ಲಿ ಭವಿಷ್ಯ ನುಡಿದರು.
ದಕ್ಷಿಣ ಕನ್ನಡ-ಉಡುಪಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರಿಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಇಂದು ಇಲ್ಲಿಗೆ ಬಂದಿರುವುದು ಬಹಳ ಜನರಿಗೆ ಅಚ್ಚರಿಯಾಗಿರಬಹುದು. ನಾವು ಮುಂಚಿನಿಂದಲೂ ಆ್ಯಂಟಿ ಪೋಲ್, ಅದರ ಆಚೆಗೆ ನಾವಿಬ್ಬರು ಒಳ್ಳೆಯ ಸ್ನೇಹಿತರು. ಕರೆದಿದ್ರೆ ಈಶ್ವರಪ್ಪನವರು ಬರುತ್ತಿದ್ದರು ಎಂದು ಹೇಳಿದರು.
ಭಂಡಾರಿ ಅವರು ದೇಣಿಗೆ ವಿಚಾರದಲ್ಲಿ ಪಕ್ಷಾತೀತ ಮನಸ್ಥಿತಿಯವರು. ಅವರಿಗೆ ಯೋಗ್ಯತೆ ಇತ್ತು, ಆದರೆ ಯೋಗ ಬಂದಿರಲಿಲ್ಲ. ಇದೀಗ ಆ ಯೋಗ್ಯತೆ ಮತ್ತು ಯೋಗ ಕೂಡಿಬಂದಿದೆ ಎಂದರು. ನಮ್ಮ ಜಿಲ್ಲೆಯಲ್ಲಿ ಒಂದು ಗುಣವಿದೆ. ಚುನಾವಣೆಯಲ್ಲಿ ನಾವು ವೈಚಾರಿಕವಾಗಿ ಹೊಡೆದಾಡುತ್ತೇವೆ. ಆದರೆ ಚುನಾವಣೆ ಮುಗಿದ ಮೇಲೆ ನಾವೆಲ್ಲರೂ ಒಂದೇ ಎಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಅನೇಕ ರಾಜಕೀಯ ಧುರೀಣರು ಬಂದು ಹೋಗಿದ್ದಾರೆ, ಎಲ್ಲಾರು ಮಾಸ್ಟರ್ ಪೀಸ್ ಗಳೇ. ರಾಜಕೀಯ ಸಂಘರ್ಷ ಸೈದ್ಧಾಂತಿಕವಾಗಿದ್ದರೂ, ನಾವು ಸ್ನೇಹಿತರೇ, ಈ ಸ್ನೇಹಕ್ಕಾಗಿಯೇ ನಾನು ಕಾರ್ಯಕ್ರಮಕ್ಕೆ ಬಂದಿರುವೆ. ನಮ್ಮ ನಿಲುವು ಬೇರೆಯಾಗಿದ್ರು, ನಾವೆಲ್ಲಾ ಒಂದೇ ಎಂದು ಆಯನೂರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸ್ಪೀಕರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು, ಮಂಜುನಾಥ್ ಭಂಡಾರಿ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಇಂದು ಕಾಂಗ್ರೆಸ್ ಸಂಘಟನೆಯನ್ನು ಮಾಡುವ ಅವಶ್ಯಕತೆ ಇದೆ. ಭಂಡಾರಿ ಅವರು ಶಿವಮೊಗ್ಗದಿಂದಲೇ ಆಯ್ಕೆಯಾಗಬೇಕಿತ್ತು. ಆದರೆ ಅದು ಆಗಲಿಲ್ಲ. ಉಡುಪಿ- ಮಂಗಳೂರಿನ ಜನರಿಗೆ ಅವರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್ ಪಕ್ಷವನ್ನು ಬೆಳೆಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಂಎಲ್ಸಿ ಮಂಜುನಾಥ್ ಭಂಡಾರಿ, ನಾನು ರಾಜಕೀಯಕ್ಕೆ ಬರಲು ಆಸ್ಕರ್ ಫರ್ನಾಂಡಿಸ್ ಕಾರಣ, ಅವರನ್ನು ನನ್ನ ಕೊನೆಯ ಉಸಿರು ಇರುವವರೆಗೂ ಮರೆಯುವುದಿಲ್ಲ. ನಾನು ಎನ್.ಎಸ್.ಯು.ಐ ಕಾರ್ಯಕರ್ತನಾಗಿ ಬಂದವನು, ಎಂದಿಗೂ ನನಗೆ ಎಂಎಲ್ಎ, ಎಂಎಲ್ಸಿ ಆಗಬೇಕು ಎಂದು ಬಯೋಡೇಟಾ ಹಿಡಿದುಕೊಂಡು ಹೋದವನಲ್ಲ. ನಾನು ಪಕ್ಷದ ಹೈಕಮಾಂಡ್ ಹೇಳಿದಕ್ಕೆ ಯಡಿಯೂರಪ್ಪನವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಒಮ್ಮೆ ಅವರನ್ನು ಭೇಟಿ ಮಾಡಿದಾಗ ಅವರು ನನ್ನ ಕೈಹಿಡಿದು ನೀನು ನನ್ನ ಎದುರು ಸ್ಪರ್ಧೆ ಮಾಡಿದಾಗ ನಾನು ಶಿವಮೊಗ್ಗ ಬಿಟ್ಟು ಹೋಗದಂತಹ ಪರಿಸ್ಥಿತಿ ಇತ್ತು ಎಂದರು. ಒಮ್ಮೆ ನನ್ನ ಇಂಜಿನಿಯರಿಂಗ್ ಕಾಲೇಜು ಸಮಸ್ಯೆಯಾದಾಗ ಯಡಿಯೂರಪ್ಪನವರ ಬಳಿ ಹೋದಾಗ ನಾನು ಕಾಂಗ್ರೆಸ್ ನವನು ಎಂದು ನೋಡದೆ ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಡಾ. ಜಿ.ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.
ಓದಿ : ರಾಮನಗರ ಎಸಿಗೆ ಕೆಲಸದಿಂದ ವಜಾಗೊಳಿಸುವ ಎಚ್ಚರಿಕೆ ಕೊಟ್ಟ ಹೈಕೋರ್ಟ್