ಶಿವಮೊಗ್ಗ: ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಟೀಕಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ನಾನು ಕಾಂಗ್ರೆಸ್‌ನವರ ರೀತಿ ಕೇವಲವಾಗಿ ಮಾತನಾಡುವುದಿಲ್ಲ ಎಂದರು. ಇದೇ ವೇಳೆ, ನಾನು ಮತ್ತೊಮ್ಮೆ ಸಿಎಂ ಆಗಲು ಕಾಂಗ್ರೆಸ್‌ಗೆ ಮತ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡುತ್ತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ನಿಮ್ಮನ್ನು ಸಿಎಂ ಆಗಲು ಬಿಡುತ್ತಾರಾ? ಎಂದು ವ್ಯಂಗ್ಯವಾಡಿದರು.
ಐದು ವರ್ಷದಲ್ಲಿ ನೀವು ರಾಜ್ಯವನ್ನು ಹದಗೆಡಿಸಿದ್ದೀರಿ. ಜಾತಿಗಳ ನಡುವೆ ವಿಷ ಬೀಜ ಬಿತ್ತಿ, ಹಿಂದುಳಿದ ವರ್ಗದವರನ್ನು ಚೂರು ಚೂರು ಮಾಡಿ ಒಬ್ಬ ಓಬಿಸಿ ನಾಯಕನನ್ನೂ ನೀವು ಬೆಳೆಸಲಿಲ್ಲ. ಅಹಿಂದ ಸ್ಥಿತಿ ಹಿಂದುಳಿದಿದೆ, ನೀವು ಮಾತ್ರ ಮುಂದುವರಿದ್ದೀರಿ ಎಂದು ವಾಕ್ಸಮರ ನಡೆಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಭದ್ರಾವತಿ ಹೊರತುಪಡಿಸಿ ಎಲ್ಲೆಡೆ ಬಿಜೆಪಿ ಶಾಸಕರಿದ್ದಾರೆ. ನೀವೆಲ್ಲಾ ಸೇರಿ ಭದ್ರಾವತಿಯಲ್ಲಿ ದೊಡ್ಡ ಸಮಾವೇಶವನ್ನು ಮಾಡಿದ್ದೀರಿ. ಎಲ್ಲರ ಮನೆಗೆ ಒಂದಲ್ಲೊಂದು ಸೌವಲತ್ತು ಲಭ್ಯವಾಗುತ್ತಿದೆ ಎಂದರು. ಹೆಣ್ಣುಮಗಳ ಹುಟ್ಟು ಶಾಪವಾಗಬಾರದು ಎಂದು ಭಾಗ್ಯಲಕ್ಷ್ಮಿ ಬಾಂಡ್ ಮಾಡಲಾಗಿದೆ. ಇನ್ನೂ ಮಾಡಬೇಕಾದ ಕೆಲಸ ಬಾಕಿ ಇದೆ. ಇದಕ್ಕಾಗಿ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ, ದಂಡಾವತಿ ಸೇರಿದಂತೆ ತಾಲೂಕಿನ ಎಲ್ಲಾ ನೀರಾವರಿ ಯೋಜನೆಯನ್ನು ಮುಗಿಸಬೇಕು. ಸರ್ಕಾರಿ ಆಸ್ಪತ್ರೆಗೆ ಜಾಗ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಮ್ಮನ ಹೆಸರು ಹೇಳದೆ, ಬಗರ್ ಹುಕುಂ ಹೆಸರಿನಲ್ಲಿ ಜನರನ್ನು ಮೋಸ ಮಾಡಿದವರನ್ನು ಮತ್ತೆ ಶಾಸಕರನ್ನಾಗಿ ಆಯ್ಕೆ ಮಾಡಬಾರದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ ಹಾಗು ಜಿಲ್ಲೆಯ ಎಲ್ಲ ಶಾಸಕರು ಮತ್ತಿತರರು ಇದ್ದರು.
ಇದನ್ನೂ ಓದಿ: ನಂಜುಂಡಪ್ಪ ವರದಿಯನ್ನು ಕಾಂಗ್ರೆಸ್ ಮೂಲೆಗೆ ಎಸೆದು ಜಿಲ್ಲೆಗೆ ಅನ್ಯಾಯ ಮಾಡಿತ್ತು : ಬೊಮ್ಮಾಯಿ