ಶಿವಮೊಗ್ಗ: ಕೊರೊನಾ ಹಾವಳಿಯಿಂದ ತತ್ತರಿಸಿ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿ, ಕ್ವಾರಂಟೈನ್ನಲ್ಲಿ ಇರುವಂತೆ ಸೂಚನೆ ನೀಡಿದ್ದರೂ ಸಹ ಅದನ್ನು ಉಲ್ಲಂಘಿಸಿದ 6 ಜನರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ಹೊರ ರಾಜ್ಯಗಳಿಂದ ವ್ಯಕ್ತಿಗಳು ನಮ್ಮ ರಾಜ್ಯಕ್ಕೆ ಬಂದಾಗ ಅವರನ್ನು ಸಾಂಸ್ಥಿಕ ಕ್ವಾರಂಟೈನ್, ಹೋಮ್ ಕ್ವಾರಂಟೈನ್ನಲ್ಲಿರಲು ಆದೇಶ ಮಾಡಲಾಗಿತ್ತು. ಅವರು ಜಿಲ್ಲೆಗೆ ಆಗಮಿಸುತ್ತಿದ್ದಂತೆಯೇ ಸೂಕ್ತ ಮುನ್ಸೂಚನೆ ನೀಡಲಾಗಿತ್ತು.
ಕ್ವಾರಂಟೈನ್ ಆದೇಶ ಉಲ್ಲಂಘನೆ ಮಾಡದಂತೆ ಖಾತ್ರಿ ಪಡಿಸಿಕೊಳ್ಳಲು CQAS(COVID-19 quarantine alert system) ಮೂಲಕ ನಿಗಾ ಇಡಲಾಗಿರುತ್ತದೆ. ಆದರೂ ಸಹ ಹೋಮ್ ಕ್ವಾರಂಟೈನ್ನಲ್ಲಿದ್ದ 6 ಜನ ಕ್ವಾರಂಟೈನ್ ನಿಯಮವನ್ನು ಅನುಸರಿಸದೆ ಉದ್ದೇಶ ಪೂರ್ವಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ಮತ್ತು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಧೃಢಪಟ್ಟಿರುತ್ತದೆ.
ಇದರಿಂದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ, ಕೋಟೆ ಪೊಲೀಸ್ ಠಾಣೆ, ತುಂಗಾ ನಗರ, ಆನವಟ್ಟಿ ಹಾಗೂ ಶಿಕಾರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಬ್ಬರ ಮೇಲೆ ಕೇಸು ದಾಖಲಿಸಲಾಗಿದೆ. ಅಲ್ಲದೆ ಮುಂದೆ ಯಾರು ಸಹ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.