ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಐದನೇ ಗ್ಯಾರಂಟಿಗೆ ಇಂದು ಮಲೆನಾಡಿನ ಮಡಿಲಲ್ಲಿ ಚಾಲನೆ ನೀಡಲಿದೆ. ಫ್ರೀಡಂ ಪಾರ್ಕ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧವಾಗಿದೆ. ಸುಮಾರು 1.50 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಸುಮಾರು 1 ಲಕ್ಷ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಾಗಿದೆ.
ನೋಂದಣಿ ಮಾಹಿತಿ: ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ದಾವಣಗೆರೆ, ಚಿಕ್ಕಮಗಳೂರು, ಶಿರಸಿ, ಕಾರವಾರ ಸೇರಿದಂತೆ ಐದಾರು ಜಿಲ್ಲೆಗಳಿಂದ ಯುವಕರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ವಿಶೇಷವಾಗಿ, ಈ ಯೋಜನೆಗೆ ಅರ್ಜಿ ಹಾಕಿರುವ ನಿರುದ್ಯೋಗಿಗಳನ್ನು ಕರೆತರಲಾಗಿದೆ.
ಊಟದ ವ್ಯವಸ್ಥೆ: ಸಿಎಂ ವಿಮಾನ ನಿಲ್ದಾಣದಿಂದ ನೇರವಾಗಿ ವೇದಿಕೆ ಆಗಮಿಸುವರು. ಇದಕ್ಕಾಗಿ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರಿಂದ ಪೊಲೀಸರನ್ನು ಕರೆಸಲಾಗಿದೆ. ಫ್ರೀಡಂ ಪಾರ್ಕ್ಗೆ ಬರುವವರಿಗಾಗಿ ಬೊಮ್ಮನಕಟ್ಟೆ, ಎಪಿಎಂಸಿ, ಸೈನ್ಸ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಡೆದಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಸಿಎಂಗೆ ಮನವಿ ನೀಡುವವರಿಗೆ ವಿಮಾನ ನಿಲ್ದಾಣದಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಸಿಎಂ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ.
'ಯುವನಿಧಿ' ಯೋಜನೆ: ಕಳೆದ ಡಿಸೆಂಬರ್ 26ರಂದು ಸಿಎಂ 'ಯುವನಿಧಿ' ಯೋಜನೆಯ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಪದವಿ, ಡಿಪ್ಲೊಮಾ ಶಿಕ್ಷಣ ಪಡೆದು 6 ತಿಂಗಳಿನಿಂದ ಉದ್ಯೋಗ ದೊರೆಯದಿದ್ದರೆ, ಗರಿಷ್ಠ 2 ವರ್ಷದವರೆಗೆ ಪದವೀಧರರಿಗೆ 3 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಪಡೆದವರಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಗೆ ನಾಳೆ ಸಿಎಂ ಚಾಲನೆ