ಶಿವಮೊಗ್ಗ : ಗಾಯಕ ವಿಜಯ್ ಪ್ರಕಾಶ್ ಭೇಟಿ ಮತ್ತು ಸಿಎಂ ಕಾರ್ಯಕ್ರಮ ಸೇರಿದಂತೆ ನಿನ್ನೆ ಶಿವಮೊಗ್ಗದಲ್ಲಿ ನಡೆದ ಘಟನೆಗಳ ನೋಟ ಇಲ್ಲಿದೆ ನೋಡಿ.
ಮುಖ್ಯಮಂತ್ರಿಗಳಿಗೆ ಸನ್ಮಾನ...
ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಶಿವಮೊಗ್ಗ ನಾಗರಿಕರಿಂದ ಅದ್ದೂರಿಯಾಗಿ ನಮ್ಮೂಲುಮೆಯ ಅಭಿಮಾನದ ಭಾವಾಭಿಮಾನಾ ಕಾರ್ಯಕ್ರಮದಲ್ಲಿ ನಾಗರಿಕ ಸನ್ಮಾನವನ್ನು ಹಸಿರು ಶಾಲು ಹೊದಿಸಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೀವನ ಪಯಣದ ವಿಶೇಷ ಹಾಡನ್ನು ರಚಿಸಿ ಗೌರವ ಸಲ್ಲಿಸಲಾಯಿತು.
ಲಕ್ಷ್ಮಿ ನರಸಿಂಹ ದೇವರ ಆರ್ಶೀವಾದ ಪಡೆದ ಗಾಯಕ...
ಫ್ರೀಡಂ ಪಾರ್ಕ್ನಲ್ಲಿ ನಡೆದ ಮುಖ್ಯಮಂತ್ರಿಗಳಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದ ಹಿನ್ನೆಲೆ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ ಗಾಯಕ ವಿಜಯ ಪ್ರಕಾಶ್ ಭದ್ರಾವತಿಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು.
ಸಿಎಂಗೆ ಘೇರಾವು ಹಾಕಲು ಯತ್ನ...
ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ನಲ್ಲಿ ಮುಖ್ಯಮಂತ್ರಿಗಳಿಗೆ ಬಹುದೊಡ್ಡ ಮಟ್ಟದ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ನಿನ್ನೆ ನಡೆಸಲಾಗಿತ್ತು. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಮಾಡಬಾರದು ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಘೇರಾವು ಹಾಕಲು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟಿಸಲಾಯ್ತು. ಇದನ್ನರಿತ ಪೊಲೀಸರು ಪ್ರತಿಭಟನಾಕಾರರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ವಶಕ್ಕೆ ಪಡೆದರು.
ಮೊಸಳೆ ಬಂತು ಮೊಸಳೆ...
ಭದ್ರಾವತಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ನಿನ್ನೆ ಮಧ್ಯಾಹ್ನ ಮೊಸಳೆ ಕಾಣಿಸಿದ್ದು, ಕಿಕ್ಕಿರದ ಜನ ಸೇತುವೆ ಮೇಲೆಯೇ ನಿಂತು ವೀಕ್ಷಣೆ ಮಾಡುತ್ತಿದ್ದರು. ಇದರಿಂದ ಸೇತುವೆ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಲ್ಲಿನ ಅಂಗಡಿ ಮಾಲೀಕರು ಕೋಳಿ ಮಾಂಸದ ತ್ಯಾಜ್ಯವನ್ನು ನದಿಗೆ ತಂದು ಹಾಕುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಮೊಸಳೆ ಹೆಚ್ಚಾಗಿ ಕಾಣಿಸುತ್ತವೆ. ನದಿ ಪಾತ್ರಕ್ಕೆ ಹೋಗುವ ಜಾನುವಾರಗಳನ್ನು ಮೊಸಳೆ ತಿನ್ನುತ್ತಿವೆ ಎಂದು ಸ್ಥಳೀಯರ ಆರೋಪವಾಗಿದೆ.
ಮನೆ ಕಳ್ಳನ ಬಂಧನ...
ಮನೆ ಕಳ್ಳನನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆತನಿಂದ ₹2.15 ಲಕ್ಷ ಮೌಲ್ಯದ 48 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಮದ್ ರೋಷನ್ (24) ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಮನೆಗಳ್ಳತನ ನಡೆಸಿದ್ದನು.
ಈತ ಹಿಂದೆ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಈಗ ಪೊಲೀಸರ ಅತಿಥಿಯಾಗಿರುವ ಈತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜುನಾಥ್, ಎಎಸ್ಐ ವಿಜಯ ಕುಮಾರ್, ಕಾನ್ಸ್ಟೇಬಲ್ಗಳಾದ ಮಂಜುನಾಥ್, ದನ್ಯಾನಾಯ್ಕ್, ಜಯಪ್ಪ ಸೇರಿ ಇತರರು ಭಾಗಿಯಾಗಿದ್ದರು.