ಶಿವಮೊಗ್ಗ: ಏಳನೇ ವೇತನ ಆಯೋಗ ರಚನೆಗೆ ಸಿಎಂ ಅಸ್ತು ಎಂದಿದ್ದಾರೆ. ಇದರಿಂದ ಸರ್ಕಾರಿ ನೌಕರರಿಗೆ ತುಂಬಾ ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವೇತನ ಆಯೋಗವನ್ನು ಕಾಲ ಕಾಲಕ್ಕೆ ರಚನೆ ಮಾಡಿ ಸ್ಯಾಲರಿ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯನ್ನು ಸಹ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಅವರು ನಿನ್ನೆ ನಡೆದ ಬಜೆಟ್ ಮೇಲಿನ ಚರ್ಚೆಯ ವೇಳೆ ವೇತನ ಆಯೋಗದ ವಿಷಯವನ್ನು ಸದನದಲ್ಲಿ ಪ್ರಾಸ್ತಪಿಸಿದ್ದು, ನಮಗೆಲ್ಲಾ ತುಂಬ ಸಂತೋಷ ತಂದ ವಿಚಾರವಾಗಿದೆ. ಇದರ ಹಿಂದೆ ನಮ್ಮ ನೆಚ್ಚಿನ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹ ಒತ್ತಡ ಹಾಕಿದ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವೇತನ ಆಯೋಗ ರಚನೆಯ ಬಗ್ಗೆ ಘೋಷಣೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕ ಬಂಧೀಖಾನೆಗಳ, ಕೈಗಾರಿಕಾ ಪ್ರದೇಶಾಭಿವೃದ್ಧಿ ತಿದ್ದುಪಡಿ ವಿಧೇಯಕ ಮಂಡನೆ
ಕೇಂದ್ರ ಸರ್ಕಾರಿ ನೌಕರರು ಪಡೆಯುತ್ತಿರುವ ವೇತನಕ್ಕೆ ಸರಿ ಸಮಾನವಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಶ್ರೇಣಿ, ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದರೆ, ರಾಜ್ಯ ಸರ್ಕಾರ ವಾರ್ಷಿಕ ರೂ.10,658 ಕೋಟಿ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ನಮ್ಮ ವೇತನ ಹೆಚ್ಚಿಸಿ, ನಮಗೆ ಸರ್ಕಾರ ಎಷ್ಟೇ ಕೆಲಸ ನೀಡಿದ್ರೂ ಸಹ ಮಾಡಲು ಸಿದ್ಧರಿದ್ದೇವೆ ಎಂದರು.