ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ವರ್ಚುಯಲ್ನಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಸಿಎಂ ಇಂದು 1074 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ 560 ಕೋಟಿ ರೂ. ಯೋಜನೆಯ ಶಂಕುಸ್ಥಾಪನೆಯನ್ನು ಮಾಡಿದರು.
ಸಿಎಂ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣದಿಂದ ವರ್ಚುಯಲ್ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನ ಮಾಡಿದ ತೃಪ್ತಿ ನನಗಿದೆ. ಇದಕ್ಕೆ ಇಂದು ಉದ್ಘಾಟನೆಯಾಗುತ್ತಿರುವ ಯೋಜನೆಗಳೇ ಸಾಕ್ಷಿ ಎಂದರು.
ನೀರಾವರಿ ಯೋಜನೆಗಳಿಗೆ ಅನುಮೋದನೆ
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಿಂದ ನನಗೆ ರಾಜಕೀಯ ಜನ್ಮ ನೀಡಿದ ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿಕಾರಿಪುರ ತಾಲೂಕಿನ ಜನತೆಯ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆಂದು ಹೇಳಲು ಹೆಮ್ಮೆ ಎನಿಸುತ್ತಿದೆ. ರೈತರ ಹೊಲಗಳಿಗೆ ನೀರುಣಿಸುವ ನೀರಾವರಿ ಯೋಜನೆಗಳು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯುದ್ಧೋಪಾಧಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಕೆರೆಗಳನ್ನು ತುಂಬಿಸುವ ಏತನೀರಾವರಿ ಯೋಜನೆಗಳಿಗೆ ದಾಖಲೆ ಪ್ರಮಾಣದ ಅನುದಾನ ಒದಗಿಸಲಾಗಿದೆ ಎಂದರು.
249 ಕೆರೆಗಳಿಗೆ ನೀರು
ತುಂಗಭದ್ರಾ ನದಿಯಿಂದ ನೀರನ್ನೆತ್ತಿ ಶಿಕಾರಿಪುರ ತಾಲೂಕಿನ ತಾಳಗುಂದ, ಉಡುಗಣಿ, ಹೊಸೂರು ಹೋಬಳಿಗಳ 249 ಕೆರೆಗಳಿಗೆ ಹಾಗೂ ಹಿರೇಕೆರೂರು ತಾಲೂಕಿನ 06 ಕೆರೆಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು 850 ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಈ ಕಾರ್ಯಕ್ರಮಗಳಲ್ಲದೆ ಕಸಬಾ ಹೋಬಳಿ ಮತ್ತು ಅಂಜನಾಪುರ ಹೋಬಳಿಯ ಹೊಸಹಳ್ಳಿ ಏತ ನೀರವಾರಿ ಕಾಮಗಾರಿಗಳನ್ನು ಸಹ ಎರಡು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳು ಭವಿಷ್ಯದಲ್ಲಿ ಜಿಲ್ಲೆಯ ರೈತರ ಆರ್ಥಿಕ ಚಿತ್ರಣವನ್ನೇ ಬದಲಾಯಿಸುವ ವಿಶ್ವಾಸ ನನಗಿದೆ ಎಂದು ಹೇಳಿದರು.
ಸವಾಲುಗಳನ್ನು ಎದುರಿಸಿದ್ದೇನೆ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಈವರೆಗೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಹಿಂದೆಂದೂ ಕಂಡಿರದ ಪ್ರಾಕೃತಿಕ ವಿಕೋಪ, ಕೊರೊನಾ ಸಾಂಕ್ರಾಮಿಕದಿಂದ ಬದುಕೇ ಅಲ್ಲೋಲ ಕಲ್ಲೋಲವಾಯಿತು. ಇದೀಗ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ನಿನ್ನೆಯಷ್ಟೇ ಶಿವಮೊಗ್ಗ ಸೇರಿ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಜನರ ರಕ್ಷಣೆ, ಪರಿಹಾರ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇವೆಲ್ಲದರ ನಡುವೆಯೂ ಈ ಭಾಗದ ಜನರ ಜೀವನ, ಆರ್ಥಿಕತೆ, ಮೂಲಸೌಕರ್ಯ ಇವೆಲ್ಲವುಗಳನ್ನು ಉನ್ನತೀಕರಿಸಲು ಎಲ್ಲ ಕ್ರಮಗಳನ್ನು ಕೈಗೊಂಡ ತೃಪ್ತಿ ನನ್ನದು. ಸಂಕಷ್ಟದ ಕಾಲದಲ್ಲಿ ಸರ್ಕಾರದೊಂದಿಗೆ ಸಹಕರಿಸಿ, ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೆಂಬಲಿಸಿದ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಶಿವಮೊಗ್ಗದ ಅಭಿವೃದ್ಧಿ ಪರ್ವ ಹೀಗೆಯೇ ಮುಂದುವರೆಯಲಿದೆ ಎಂದರು.