ಶಿವಮೊಗ್ಗ: ನಗರದ ಹೆಲಿಪ್ಯಾಡ್ ಪಕ್ಕದಲ್ಲಿರುವ ಆರ್ಯ ಈಡಿಗ ಸಮುದಾಯ ಭವನಕ್ಕೆ ನಾನೇ ಶಂಕುಸ್ಥಾಪನೆ ಮಾಡಿ, ನಾನೇ ಉದ್ಘಾಟನೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಿಲ್ಲಾ ಆರ್ಯ ಈಡಿಗರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮುದಾಯ ಭವನ ನೀರಿಕ್ಷೆಗೂ ಮೀರಿ ಚೆನ್ನಾಗಿ ಬಂದಿದೆ. ಈ ಸಮುದಾಯ ಭವನವನ್ನು ನಿಮ್ಮ ಸಮಾಜ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಳಸಿ ಎಂದು ಸಲಹೆ ನೀಡಿದರು. ರಾಜ್ಯದ ಆರ್ಥಿಕ ಬೆಳವಣಿಕೆಗೆಯಲ್ಲಿ ಈಡಿಗ ಸಮುದಾಯದ ಪಾತ್ರ ಅತಿ ಮುಖ್ಯವಾಗಿದೆ. ಸಮುದಾಯದ ಅನೇಕ ನಾಯಕರು ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಎಲ್ಲರಿಗೂ ಸಮಬಾಳು, ಸಮಪಾಲು ಎಂಬ ಸಮಾನ ಚಿಂತನೆ ಸರ್ಕಾರದ್ದಾಗಿದೆ. ಈಡಿಗ ಸಮುದಾಯದವರ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ಸಮುದಾಯದ ಮಠಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ನೀಡಿರುವ ಅನುದಾನದ ಸದುಪಯೋಗ ಪಡೆದುಕೊಂದು ಸಮುದಾಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಈಡಿಗ ಸಮುದಾಯ ಆರ್ಥಿಕ ಸ್ವಾವಲಂಬನೆ ಹಾಗೂ ಸಬಲೀಕರಣ ಸಾಧಿಸಿ, ಸಮಾಜದ ಮುಖ್ಯವಾಹಿನಿಗೆ ಬರುವತ್ತ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.
ಓದಿ : ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನೂತನ 'ವಿಜಯನಗರ ಜಿಲ್ಲಾ ಭವನ' ನಿರ್ಮಾಣ
ಇದಕ್ಕೂ ಮುನ್ನ ಮಾತನಾಡಿದ ಸಾಗರ ಶಾಸಕ ಹರತಾಳು ಹಾಲಪ್ಪ, 12 ವರ್ಷಗಳ ನಂತರ ಕಾಮಗಾರಿ ಪ್ರಾರಂಭವಾದ ಕಟ್ಟಡದ ಉದ್ಟಾಟನೆ ನಡೆದಿದೆ. ಅಂದು ಯಡಿಯೂರಪ್ಪನವರೇ ಜಾಗ ನೀಡಿದ್ದರು. ಈಗ ಅವರೇ ಉದ್ಘಾಟನೆ ಮಾಡುತ್ತಿರುವುದು ಸಂತೋಷ ತಂದಿದೆ. ನಮ್ಮ ಸಮುದಾಯದ ಮಹಿಳಾ ಹಾಸ್ಟೆಲ್ ಬೇರೆಯವರಿಗೆ ಬಾಡಿಗೆಗೆ ನೀಡದೆ, ನಮ್ಮ ಹೆಣ್ಣು ಮಕ್ಕಳಿಗೆ ನೀಡಿ ಎಂದು ಸಮಾಜದ ಮುಖಂಡರ ಕಾಲೆಳೆದರು.
ಯಡಿಯೂರಪ್ಪನವರು ಸಿಎಂ ಆದಾಗ ನಮ್ಮ ಸಮಾಜಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಕಟ್ಟುವ ಮನಸ್ಸುಗಳಿದ್ದರೆ, ನಾವು ಕೊಡಲು ಬದ್ಧರಾಗಿರುತ್ತೇವೆ. ಅಂದು ಸಮುದಾಯ ಭವನದ ಗುದ್ದಲಿ ಪೂಜೆಗೆ ಬಹಿಷ್ಕಾರ ಹಾಕಿದ ಬೇಳೂರು ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿಯೇ ಉದ್ಟಾಟನೆ ಮಾಡಿದ್ದು ಸಂತೋಷ ತಂದಿದೆ ಎಂದರು.